ಗೆಲುವಿನಲ್ಲಿ ದ್ರೌಪದಿ ಮುರ್ಮು ರಿಂದ ದಾಖಲೆ – ಸಿ.ಟಿ.ರವಿ

ಗೆಲುವಿನಲ್ಲಿ ದ್ರೌಪದಿ ಮುರ್ಮು ರಿಂದ ದಾಖಲೆ – ಸಿ.ಟಿ.ರವಿ

ಬೆಂಗಳೂರು, ಜು 18 : ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಬೆಂಬಲದೊಂದಿಗೆ ಸ್ಪರ್ಧಿಸಿರುವ ಗೌರವಾನ್ವಿತ ದ್ರೌಪದಿ ಮುರ್ಮು ಅವರು ದಾಖಲೆ ಮತಗಳಿಂದ ಗೆಲುವು ಪಡೆಯಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈಗಿನ ಎನ್ಡಿಎ ಮತ್ತು ಇತರ ಸಮರ್ಥನೆ ಮಾಡಿದ ಪಕ್ಷಗಳ ಬಲವನ್ನು ಗಮನಿಸಿದರೆ ಶೇ 70ಕ್ಕೂ ಹೆಚ್ಚು ಮತಗಳು ಸಿಗುವ ನಿರೀಕ್ಷೆ ಇದೆ. ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಒಬ್ಬ ಆದಿವಾಸಿ ಮಹಿಳೆಗೆ ರಾಷ್ಟ್ರಪತಿಯಾಗುವ ಅವಕಾಶ ಲಭಿಸುತ್ತದೆ ಎಂಬ ನಂಬಿಕೆ ನನಗಿದೆ ಎಂದರು.

ಆದಿವಾಸಿ ಮಹಿಳೆಯ ಅಭ್ಯರ್ಥಿತನವನ್ನು ಇತರ ಎಲ್ಲ ಪಕ್ಷಗಳು ಸ್ವಾಗತಿಸಿ ಬೆಂಬಲಿಸುವ ನಿರೀಕ್ಷೆ ನಮ್ಮದಾಗಿತ್ತು. ಆದರೆ, ಹಾಗಾಗದೆ ಇರುವುದು ದುರ್ದೈವದ ಸಂಗತಿ. ಕೆಲವು ರಾಜಕೀಯ ಪಕ್ಷಗಳು ಬಿಜೆಪಿಯನ್ನು ವಿರೋಧಿಸಬೇಕೆಂಬ ಭರದಲ್ಲಿ ರಾಷ್ಟ್ರವನ್ನು, ಆದಿವಾಸಿ ಮಹಿಳೆಯ ಉಮೇದ್ವಾರಿಕೆಯನ್ನು ವಿರೋಧಿಸಿ ಅವರ ಸಾಮಥ್ರ್ಯದ ಬಗ್ಗೆ ಅಪನಂಬಿಕೆಯ ಮಾತನ್ನಾಡಿದರು. ಒಬ್ಬ ಆದಿವಾಸಿ ಮಹಿಳೆ ತಾನು ಕಲಿಯುವ ವಾತಾವರಣ ಇಲ್ಲದೆ ಇದ್ದಾಗ ಆಕೆ ಸುಶಿಕ್ಷಿತೆಯಾಗಿ ಕಲಿತು, ಸರಕಾರಿ ನೌಕರಿ, ಉಪನ್ಯಾಸಕಿ, ಕಾರ್ಪೊರೇಟರ್, ಶಾಸಕಿ, ಒಡಿಶಾ ಸರಕಾರದಲ್ಲಿ ಸಚಿವೆಯಾಗಿ ಹಲವು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ, ಜಾರ್ಖಂಡ್ ರಾಜ್ಯದ ರಾಜ್ಯಪಾಲೆಯಾಗಿ ತನ್ನ ಸಾಮಥ್ರ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ವಿವರಿಸಿದರು.

ಮುರ್ಮು ಅವರನ್ನು ರಬ್ಬರ್ ಸ್ಟಾಂಪ್ ಎಂದು ಮಾತನಾಡುವುದು ಆದಿವಾಸಿ ಜನಾಂಗದ ಬಗ್ಗೆ ಅವರಿಗೆ ಇರುವ ಅಸಡ್ಡೆಯ ಭಾವನೆಯನ್ನು ತೋರಿಸುತ್ತದೆ. ಕಾಂಗ್ರೆಸ್, ಆರ್ಜೆಡಿ ಸೇರಿದಂತೆ ಹಾಗೆ ಕರೆದವರು ರಾಷ್ಟ್ರದ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.

Related