ಕೊಲೆ ಪ್ರಕರಣಕ್ಕೆ ಮರು ಜೀವ

ಕೊಲೆ ಪ್ರಕರಣಕ್ಕೆ ಮರು ಜೀವ

ಹುಬ್ಬಳ್ಳಿ, ಫೆ. 21: ಧಾರವಾಡ ಜಿಲ್ಲೆ ಹುಬ್ಬಳ್ಳಿ ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಮರು ಜೀವ ಬಂದಿದೆ. ಈ ಪ್ರಕರದ ತನಿಖೆಯನ್ನು ಸಿಬಿಐ ಮುಂದುವರೆಸಲು ಇದ್ದ ಅಡೆತಡೆ ನಿವಾರಣೆಯಾಗಿದೆ. ಸಿಬಿಐ ತನಿಖೆಗೆ ತಡೆ ನೀಡಿದ್ದ ಧಾರವಾಡ ವಿಭಾಗೀಯ ಪೀಠದ ಆದೇಶ ಸುಪ್ರೀಂಕೋರ್ಟ್ ತೆರವುಗೊಳಿಸಿದೆ. ಇದರಿಂದ ಮತ್ತೆ ತನಿಖೆ ಹೊಣೆ ಸಿಬಿಐಗೆ ಸಿಕ್ಕಂತಾಗಿದೆ.

ನ್ಯಾ. ದೀಪಕ್ ಹೂಡಾ ನೇತೃತ್ವದ ದ್ವಿಸದಸ್ಯ ಪೀಠ ತಡೆ ಆಜ್ಞೆಯನ್ನು ತೆರವುಗೊಳಿಸಿದೆ. ಸಿಬಿಐ ತನಿಖೆಗೆ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠದಿಂದ ಬಸವರಾಜ್ ಮುತಗಿ ಎಂಬುವವರು ತಡೆ ತಂದಿದ್ದರು. ಆದೇಶದ ವಿರುದ್ಧ ಸಿಬಿಐ ಅಧಿಕಾರಿಗಳು ಸುಪ್ರೀಂಕೋರ್ಟ್ ಗೆ ಮೊರೆ ಹೋಗಿದ್ದರು. 2016, ಜೂನ್ 15 ರಂದು ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಸಪ್ತಾಪುರದ ಉದಯ್ ಜಿಮ್ ಬಳಿ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದರು. ಜಿಮ್‌ನಲ್ಲಿ ಯೋಗೇಶ ಗೌಡ ಪೇಪರ್ ಓದುತ್ತಾ ಕುಳಿತುಕೊಂಡ ಸಂದರ್ಭದಲ್ಲಿ ನಾಲ್ವರು ದುಷ್ಕರ್ಮಿಗಳು ದಾಳಿ ನಡೆಸಿದ್ದರು.

ಯೋಗೀಶ್ ಗೌಡ ಕೊಲೆ ಪ್ರಕರಣ; ಎಫ್‌ಐಆರ್ ದಾಖಲಿಸಿಕೊಂಡ ಸಿಬಿಐ

ಓಡಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬಲಗೈಗೆ ಮಚ್ಚಿನಿಂದ ಕೊಚ್ಚಿದ್ದರು. ನಂತರ ಬೆನ್ನತ್ತಿದ ದುಷ್ಕರ್ಮಿಗಳು ಮಚ್ಚಿನಿಂದ ದಾಳಿ ನಡೆಸಿ, ಭೀಕರವಾಗಿ ಕೊಲೆಗೈದಿದ್ದರು.ಈ ಪ್ರಕರಣ ಧಾರವಾಡದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಹತ್ಯೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮಾಜಿ ಸಚಿವ ವಿನಯ್ ಕುಲಕರ್ಣಿ ಹೆಸರು ಕೂಡಾ ಪ್ರಕರಣದಲ್ಲಿ ತಳಕು ಹಾಕಿಕ್ಕೊಂಡಿತ್ತು. ಪ್ರಕರಣದ ಕುರಿತಾಗಿ ಆರು ಆರೋಪಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸಿಕೊಂಡು ಸಿಬಿಐ ತನಿಖೆ ಕೈಗೆತ್ತಿಕೊಂಡಿತ್ತು. ಇದಕ್ಕೆ ಧಾರವಾಡ ವಿಭಾಗೀಯ ಪೀಠ ತಡೆ ನೀಡಿತ್ತು.

 

 

Related