ಸದ್ದಿಲ್ಲದೆ ಹೆಚ್ಚುತ್ತಿವೆ ಬಾಲ್ಯ ವಿವಾಹಗಳು

ಸದ್ದಿಲ್ಲದೆ ಹೆಚ್ಚುತ್ತಿವೆ ಬಾಲ್ಯ ವಿವಾಹಗಳು

ತುಮಕೂರು, ಫೆ. 21: ಶ್ಯಕ್ಷಣಿಕವಾಗಿ ಮುಂದುವರಿಯುತ್ತಿರುವ ಮಧುಗಿರಿ ಶೈಕ್ಷಣಿಕ ಜಿಲೆಯಲ್ಲಿ ಬಾಲ್ಯ ವಿವಾಹ ಇಂದಿಗೂ ಜೀವಂತವಾಗಿರುವ ಹಲವು ಘಟನೆಗಳು ಬೆಳಕಿಗೆ ಬರುತ್ತಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ದೂರು ಬಂದ ಹಲವು ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯುತ್ತ ಬಂದಿದ್ದಾರೆ. ದೂರು ಬಾರದೆ ಹಲವು ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ಇಷ್ಟಾದರೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಲ್ಲದೇ ಮದುವೆಗಳು ಅಬಾಧಿತವಾಗಿ ನಡೆದಿವೆ.

ಲೆಕ್ಕಕ್ಕಿಲ್ಲದ ಬಾಲ್ಯ ವಿವಾಹಗಳು: ಕಳೆದ 5 ವರ್ಷಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಬರೊಬ್ಬರಿ 42 ಬಾಲ್ಯ ವಿವಾಹದ ದೂರು ಬಂದಿದ್ದು, ಇವುಗಳಲ್ಲಿ 40ಕ್ಕೂ ಹೆಚ್ಚು ಬಾಲ್ಯ ವಿವಾಹ ತಡೆಯಲಾಗಿದೆ. 15ಕ್ಕೂ ಹೆಚ್ಚು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ವಿಚಾರಣೆ ಮಾಡಲಾಗಿದೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ನಿಜಕ್ಕೂ ಅಚ್ಚರಿಯಾಗುತ್ತಿದೆ. ಬಾಲ್ಯ ವಿವಾಹಗಳನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿ ವರ್ಗ ಹೇಳುತ್ತಿದ್ದರೂ, ಸದ್ದಿಲ್ಲದೇ 42 ಬಾಲ್ಯ ವಿವಾಹ ಪ್ರಕರಣಗಳನ್ನು ಸರ್ಕಾರೇತರ ಸಂಸ್ಥೆಗಳ ವರದಿಯಂತೆ ವರ್ಷಕ್ಕೆ 80 ರಿಂದ 140 ಕ್ಕೂ ಹೆಚ್ಚು ಬಾಲ್ಯ ವಿವಾಹಗಳು ನಡೆದಿವೆ.

ಅಧಿಕಾರಿಗಳಿಗೆ ದಿಗ್ಬಂಧನ..!

ಬಾಲ್ಯ ವಿವಾಹ ತಡೆಗೆ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಸಹಾಯವಾಣಿ-1094 ಸೇರಿದಂತೆ ಯುನೆಸೆಫ್ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಪೊಲೀಸ್ ಪಡೆಗೆ ವಿಶೇಷಾಧಿಕಾರ ನೀಡಲಾಗಿದೆ. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಕ್ಕಳ ಮದುವೆ ತಡೆಯಲು ತೆರಳಿದ ಅಧಿಕಾರಿ, ಸಿಬ್ಬಂದಿಗೆ ದಿಗ್ಬಂಧನ ಹಾಕಿ ಮದುವೆ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿವೆ. ಬಾಲ್ಯ ವಿವಾಹ ತಡೆಗೆ ತೆರಳಿದ ಅಧಿಕಾರಿ ವರ್ಗಕ್ಕೆ ರಾಜಕಾರಣಿಗಳ ಮೂಲಕ ಒತ್ತಡ ಹಾಕಿದ ಪ್ರಕರಣಗಳೂ ಇವೆ.

ಬಡತನ, ಮೌಢ್ಯವೇ ವಿವಾಹಕ್ಕೆ ಕಾರಣ: ಪ್ರಸ್ತುತ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನುಸಾರ ಬಾಲ್ಯ ವಿವಾಹ ಮಾಡಿದ ಅರ್ಚಕರು, ತಂದೆ-ತಾಯಿ, ಹುಡುಗನ ತಂದೆ-ತಾಯಿ, ಮದುವೆಗೆ ಬರುವ ಸಂಬಂಧಿಕರೂ ಸೇರಿದಂತೆ ವಿವಾಹ ನೆರವೇರಿಸಲು ಸಹಕಾರ ನೀಡುವ ಸಂಘಟಕರ ಮೇಲೂ ಕಾನೂನಿನಡಿ ಪ್ರಕರಣ ದಾಖಲಿಸಲು ಅವಕಾಶವಿದೆ. ಕೆಲವರ ಮೇಲೆ ಪ್ರಕರಣ ದಾಖಲಾಗಿ ನ್ಯಾಯಾಲಯದ ಮೆಟ್ಟಿಲೇರಿರುವ ಪ್ರಕರಣಗಳೂ ಇವೆ. ಇಷ್ಟಾದರೂ ಪಾಲಕರಲ್ಲಿ, ಅದರಲ್ಲೂ ಗ್ರಾಮೀಣ ಭಾಗದ ಜನತೆ ಬಾಲ್ಯ ವಿವಾಹ ಮಾಡುವುದನ್ನು ನಿಲ್ಲಿಸಿಲ್ಲ. ಹಿರಿಯರ ಆಣೆ-ಪ್ರಮಾಣ, ಸಂಬಂಧಿಕರ ನಡುವಣ ಒಪ್ಪಂದ, ಹೆಣ್ಣು ಮಕ್ಕಳು ಮನೆಗೆ ಭಾರ ಅನ್ನೋ ಭಾವನೆ, ಬೇಗನೆ ಮದುವೆ ಮಾಡಿದರೆ ನಮ್ಮ ಹೊಣೆ ಕಡಿಮೆಯಾಗಲಿದೆ ಎನ್ನುವ ಯೋಚನೆಯಿಂದಾಗಿ ಕಂದಮ್ಮಗಳನ್ನು ಕಂದಕಕ್ಕೆ ನೂಕುವ ಕಾಯಕ ನಡೆದಿದೆ.

ಫೇಲಾದ್ರೆ ಮದುವೆ ಮಾಡುವ ಪೋಷಕರು..!

ಹೆಣ್ಣು ಮಕ್ಕಳು ಏನಾದರೂ ಎಸ್‌ಎಸ್‌ಎಲ್‌ಸಿ ಫೇಲಾದರೆ ತಕ್ಷಣ ಪೋಷಕರು ಮದುವೆ ಮಾಡಲು ಮುಂದಾಗುತ್ತಿರುವುದು ಕಂಡು ಬರುತ್ತದೆ. ಒಂದು ವೇಳೆ ಅವರು ಪಾಸಾದರೆ ಮುಂದಿನ ಶಿಕ್ಷಣ ಕೊಡಿಸಲು ನಿರ್ಧಾರ ಮಾಡುತ್ತಾರೆ. ಯಾವುದೇ ಕೋರ್ಸ್ ಉತ್ತೀರ್ಣವಾಗಿಲ್ಲವೆಂದರೆ ಅಪ್ರಾಪ್ತರಿಗೆ ಮದುವೆ ಮಾಡುವ ನಿಟ್ಟಿನಲ್ಲಿ ಮುಂದಾಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಖರ್ಚು-ವೆಚ್ಚ ಫೋಲಾಗುತ್ತದೆ ಅಧಿಕಾರಿಗಳು

ವಿಶೇಷವೆಂದರೆ ಕೆಲವು ಕಡೆ ಬಾಲ್ಯ ವಿವಾಹದ ಮಾಹಿತಿ ಬಂದರೂ ಪೋಷಕರು ಮದುವೆಗೆ ಮಾಡಿರುವ ಹಣವು ಫೋಲಾಗುತ್ತದೆ, ಪೋಷಕರು ಸಾಲ ಮಾಡಿ ಮದುವೆ ಮಾಡುತ್ತಿದ್ದಾರೆ ಎಂಬ ಒಂದೇ ಒಂದು ಮುಲಾಜಿಗೆ ಒಳಗಾಗಿ ಮದುವೆಯನ್ನು ಮುಂದುವರಿಸಲು ಅಧಿಕಾರಿಗಳು ಬಿಡುತ್ತಿದ್ದಾರೆ ಎನ್ನಲಾಗ್ತಿದೆ. ವಿಚಾರ ಗಮನಕ್ಕೆ ಬಂದರೂ ಕ್ರಮಕ್ಕೆ ಮೇಲಧಿಕಾರಿಗಳು ಮುಂದಾಗದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಹೆಚ್ಚುತ್ತಿರುವ ಗರ್ಭಪಾತಗಳು: ಬಾಲ್ಯ ವಿವಾಹಗಳು ಹೆಚ್ಚಾಗುತ್ತಿರುವುದರಿಂದ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನಲ್ಲಿ ಗರ್ಭಪಾತಗಳು ಹೆಚ್ಚಾಗುತ್ತಿವೆ. ಹಲವು ಹೆಣ್ಣು ಮಕ್ಕಳಿಗೆ ಗರ್ಭ ಧರಿಸುವ ಸಾಮರ್ಥ್ಯವಿಲ್ಲದ ವಯಸ್ಸಿನಲ್ಲಿ ಮದುವೆ ಮಾಡುವುದರಿಂದ ಅವರ ದೇಹದ ಶಕ್ತಿ ಕುಂದಿ, ಹಲವು ಅನಾರೋಗ್ಯಗಳಿಗೆ ತುತ್ತಾಗುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಲಿದೆ.

ಜನಸಂಖ್ಯೆ ಹೆಚ್ಚಳ: ಬಾಲ್ಯ ವಿವಾಹಗಳು ಹೆಚ್ಚಾಗುತ್ತಿರುವುದರಿಂದ ಜನಸಂಖ್ಯೆಯೂ ಕೂಡ ಕ್ರಮೇಣವಾಗಿ ಹೆಚ್ಚಾಗುತ್ತಲಿದೆ. ಇತ್ತೀಚಿನ ಜನಸಂಖ್ಯೆ ಆಧಾರಿತ ಗಣತಿಗಳು ಕೂಡ ಈಗಾಗಲೇ ದೃಢಪಡಿಸಿವೆ. ಇದರಿಂದ ಕೆಲ ಭಾಗಗಳಲ್ಲಿನ ಜನರು ಉದ್ಯೋಗ ಸಿಗದೆ ಬೆಂಗಳೂರಿನಂತಹ ಪಟ್ಟಣಗಳ ಕಡೆ ಮುಖ ಮಾಡಿರುವುದು ಕಂಡು ಬರುತ್ತಿದೆ.

 

Related