ಬೆಲೆ ಏರಿಕೆ ವಿರೋಧಿಸಿ ಸಂಸತ್ ಭವನದ ಮುಂದೆ ಪ್ರತಿಭಟನೆ

ಬೆಲೆ ಏರಿಕೆ ವಿರೋಧಿಸಿ ಸಂಸತ್ ಭವನದ ಮುಂದೆ ಪ್ರತಿಭಟನೆ

ನವದೆಹಲಿ, ಜು.19- ಅಗತ್ಯ ವಸ್ತುಗಳ ಬೆಲೆ ಏರಿಕೆ, ದುಬಾರಿ ಜಿಎಸ್‍ಟಿ ದರ ವಿರೋಧಿಸಿ ಪ್ರತಿಪಕ್ಷಗಳು ಇಂದು ಸಂಸತ್ ಭವನದ ಮುಂದಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆದಿದ್ದು, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಗಿ ಮಧ್ಯಾಹ್ನದ ವೇಳೆಗೆ ಕಲಾಪ ಮುಂದೂಡಿಕೆಯಾಗಿದೆ.

ಸಂಸತ್ ಆವರಣದಲ್ಲಿನ ಮಹಾತ್ಮಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಚತುರ್ವೇದಿ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.

ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ, ಧರಣಿ, ಹೋರಾಟ, ಉಪವಾಸ ಹಾಗೂ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಿ ಇತ್ತೀಚೆಗಷ್ಟೆ ಲೋಕಸಭೆಯ ಕಾರ್ಯದರ್ಶಿ ಅವರು ಆದೇಶ ಹೊರಡಿಸಿದ್ದರು. ಅದನ್ನು ಮೀರಿ ಸಂಸತ್ ಅಧಿವೇಶನದ ಅವಧಿಯಲ್ಲೇ ಪ್ರತಿಭಟನೆಗಳನ್ನು ನಡೆಸಲಾಗಿದೆ.

ನಿನ್ನೆಯಿಂದ ಆರಂಭವಾಗಿರುವ ಮುಂಗಾರು ಅಧಿವೇಶನದಲ್ಲಿ ಮೊದಲ ದಿನ ರಾಷ್ಟ್ರಪತಿ ಚುನಾವಣೆ, ಶ್ರದ್ಧಾಂಜಲಿ ಮತ್ತು ನೂತನವಾಗಿ ಚುನಾಯಿತರಾದ ಸದಸ್ಯರ ಪ್ರಮಾಣವಚನ ಸ್ವೀಕಾರ ಕಲಾಪಗಳು ನಡೆದವು. ಅದಕ್ಕೂ ಮೊದಲು ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಬೆಲೆ ಏರಿಕೆ ಪ್ರಸ್ತಾಪಿಸಲು ಅವಕಾಶ ಕೋರಿ ನಡುವೆ ಗದ್ದಲ ಮಾಡಿದ್ದರಿಂದ ಗೊಂದಲ ಉಂಟಾಗಿ, ಕೋಲಾಹಲದ ವಾತವರಣ ನಿರ್ಮಾಣವಾಯಿತು.

ಇದರದಿಂದ ಕೆಲವೇ ಗಂಟೆಗಳಲ್ಲಿ ಅದನ್ನು ಮುಂದೂಡಲಾಯಿತು. ಎರಡನೇ ದಿನವಾದ ಇಂದು ಪ್ರತಿಪಕ್ಷಗಳು ಬೆಲೆ ಏರಿಕೆ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆಗಿಳಿದಿವೆ. ಲೋಕಸಭೆ ಆರಂಭದಲ್ಲೇ ಪ್ರತಿಪಕ್ಷಗಳ ಸಂಸದರು ಬೆಲೆ ಏರಿಕೆ ವಿರುದ್ಧ ಘೋಷಣೆಗಳನ್ನು ಕೂಗಿ, ಪ್ಲೆಕಾರ್ಡ್‍ಗಳನ್ನು ಪ್ರದರ್ಶಿಸಿದರು.

ಇದನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರೋಧಿಸಿದರು. ನಿಯಮಗಳ ಪ್ರಕಾರ ಸಂಸತ್ ಒಳಗೆ ಪ್ಲೆಕಾರ್ಡ್ ತರಲು ಅವಕಾಶವಿಲ್ಲ ಎಂದು ಹೇಳಿದರು. ಸ್ಪೀಕರ್ ಅವರ ಮನವಿಗೆ ಪ್ರತಿಪಕ್ಷಗಳ ಸದಸ್ಯರು ಸ್ಪಂದಿಸದೇ ಇದ್ದಾಗ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

 

Related