ಸಚಿವ ಸ್ಥಾನಕ್ಕೆ ಸಿಡಿದೆದ್ದ ರೆಡ್ಡಿ ಸಮುದಾಯ

ಸಚಿವ ಸ್ಥಾನಕ್ಕೆ ಸಿಡಿದೆದ್ದ ರೆಡ್ಡಿ ಸಮುದಾಯ

ಬೆಂಗಳೂರು: ರಾಜ್ಯದಲ್ಲಿರುವ ರೆಡ್ಡಿ ಸಮುದಾಯದ ಜನಸಂಖ್ಯೆಯನ್ನು ಪರಿಗಣಿಸಿ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ರೆಡ್ಡಿ ಸಮುದಾಯಕ್ಕೆ ಸೇರಿದ ಶಾಸಕರಿಗೆ ಹೆಚ್ಚಿನ ಪ್ರಾತಿನಿಧ್ಯ ಹಾಗೂ ಪ್ರತ್ಯೇಕ ರೆಡ್ಡಿ ನಿಗಮ ಸ್ಥಾಪನೆ ಮಾಡುವಂತೆ ಆಗ್ರಹಿಸಿ ಶನಿವಾರ ರೆಡ್ಡಿ ಜನ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಶಾಸಕ ಎಂ ಸತೀಶ್ ರೆಡ್ಡಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವುದಾಗಿ ಹೇಳಿ ಕೊನೆ ಕ್ಷಣದಲ್ಲಿ ಶಾಸಕರ ಹೆಸರು ಕೈಬಿಟ್ಟಿದ್ದಕ್ಕೆ ಪ್ರತಿಭಟನಾಕಾರರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದರು.

ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಹರಿಹರದ ವೇಮಾನಂದ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ 70 ಲಕ್ಷ ಜನ ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಲ್ಲದೆ, ನಮ್ಮ ಸಮುದಾಯದ 11 ಜನ ಶಾಸಕರು ಆಯ್ಕೆಯಾಗಿದ್ದಾರೆ.

ರಾಜ್ಯದಲ್ಲಿ ಬಹಳಷ್ಟು ಪ್ರಾಮುಖ್ಯತೆ ಹೊಂದಿರುವ ರೆಡ್ಡಿ ಸಮುದಾಯಕ್ಕೆ ಸೇರಿದ ಕೇವಲ ಒಬ್ಬ ಶಾಸಕರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಈ ಸರ್ಕಾರ ಒಂದು ನಿರ್ದಿಷ್ಟ ಸಮುದಾಯದ ಓಲೈಕೆಗೆ ಮುಂದಾಗಿ ಬೇರೆ ಸಮುದಾಯಗಳನ್ನು ಮರೆಯುತ್ತಿದ್ದಾರೆ. ಈ ರೀತಿ ಮಾಡಿದರೆ ಸರಕಾರಕ್ಕೆ ಬೇರೆ ಸಮುದಾಯಗಳಿಂದ ವಿರೋಧ ವ್ಯಕ್ತವಾಗುತ್ತದೆ ಎಂದರು.

ಅಭಿವೃದ್ಧಿಗೆ ಜಮೀನು ನೀಡಿದ್ದೇವೆ
ರೆಡ್ಡಿ ಸಂಘದ ಅಧ್ಯಕ್ಷ ಎಸ್. ಜಯರಾಮ ರೆಡ್ಡಿ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ಬೆಂಗಳೂರು ನಿರ್ಮಾಣಕ್ಕೆ ರೆಡ್ಡಿಗಳು ಅಮೂಲ್ಯ ಕೊಡುಗೆ ನೀಡುತ್ತಾ ಬಂದಿದ್ದು, ಪಾಪರಡ್ಡಿ ಪಾಳ್ಯ, ಮುನಿರೆಡ್ಡಿ ಪಾಳ್ಯ ಹೀಗೆ ಹತ್ತು ಹಲವು ಹೆಸರಿನ ಪ್ರದೇಶಗಳು ಈಗಲೂ ರೆಡ್ಡಿಗಳ ಹೆಸರಿನಿಂದಲೇ ಕರೆಯಲಾಗುತ್ತಿದೆ.

ವಿಶೇಷವಾಗಿ ಬೆಂಗಳೂರಿನ ಕೈಗಾರಿಕಾ ಅಭಿವೃದ್ಧಿಗೆ ಜನಾಂಗ ಸಾಕಷ್ಟು ಕೊಡುಗೆ ನೀಡಿದ್ದು, ರೆಡ್ಡಿ ಸಮುದಾಯದವರಿಗೆ ಸೇರಿದ ಸಹಸ್ರಾರು ಎಕರೆ ಅತ್ಯಮೂಲ್ಯ ಜಮೀನು ಬೆಂಗಳೂರು ಅಭಿವೃದ್ಧಿಗಾಗಿ ನೀಡಿದ್ದೇವೆ. ಬೆಂಗಳೂರು ನಗರದ ಶ್ರೇಯೋಭಿವೃದ್ಧಿಗಾಗಿ ರೆಡ್ಡಿ ಸಮುದಾಯ ಮಾಡಿರುವ ತ್ಯಾಗವನ್ನು ಬಿಜೆಪಿ ಸರ್ಕಾರ ಉಪೇಕ್ಷೆ ಮಾಡಿದೆ ಎಂದು ಹೇಳಿದರು.

ಬೃಹತ್ ಪ್ರತಿಭಟನೆ
ಪ್ರತಿಭಟನೆಯಲ್ಲಿ ಮಾಜಿ ಮಹಾಪೌರ ಎಸ್. ಕೆ. ನಟರಾಜ್, ರೆಡ್ಡಿ ಜನಸಂಘದ ಉಪಾಧ್ಯಕ್ಷರಾದ ವೆಂಕಟಶಿವಾರೆಡ್ಡಿ, ಶಿವರಾಮ್, ಪ್ರಧಾನ ಕಾರ್ಯದರ್ಶಿ ಕೃಷ್ಣಾ ರೆಡ್ಡಿ. ಕೆ.ಎಂ., ಜಂಟಿ ಕಾರ್ಯದರ್ಶಿಗಳಾದ ಸದಾಶಿವ ರೆಡ್ಡಿ, ಕೃಷ್ಣಾ ರೆಡ್ಡಿ ಕೆ.ಎಂ ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ರೆಡ್ಡಿ ಸಮುದಾಯದವರು ಪಾಲ್ಗೊಂಡಿದ್ದರು. ಬಿಜೆಪಿ ಸಚಿವ ಸಂಪುಟದಲ್ಲಿ ರೆಡ್ಡಿ ಸಮುದಾಯವನ್ನು ಕಡೆಗಣಿಸಿರುವುದನ್ನು ಖಂಡಿಸಿ ಇಂದು ಕರ್ನಾಟಕ ರೆಡ್ಡಿ ಜನ ಸಂಘದ ವತಿಯಿಂದ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.

Related