ಕುರುಬ ಸಮಾಜದಿಂದ ಪ್ರತಿಭಟನೆ

ಕುರುಬ ಸಮಾಜದಿಂದ ಪ್ರತಿಭಟನೆ

ಶಹಾಪುರ : ಕುರುಬ ಸಮಾಜಕ್ಕೆ ಸೇರಿದ ಮುಖಂಡರೊಬ್ಬರ ಮೇಲೆ ಹಲ್ಲೆ ನಡೆಸಿ, ಸಮಾಜದ ಗುರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮುಖಂಡ ಬಾಬಾಗೌಡನನ್ನು ತಕ್ಷಣ ಬಂಧಿಸಿ ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘ, ಕ್ರಾಂತಿವೀರ ಸಂಗೂಳ್ಳಿ ರಾಯಣ್ಣ ಯುವಕರ ಸಂಘದ ವತಿಯಿಂದ ಮಾನವ ಸರಪಳಿ ಮಾಡುವ ಮೂಖಾಂತರ ನಗರದ ಚರಬಸವೇಶ್ವರ ಕಮಾನ್ ನಿಂದ ಬಸವೇಶ್ವರ ವೃತ್ತದ ವರೆಗೆ ಬೃಹತ್ ಪ್ರತಿಭಟನೆ ನಡೆಸಿ ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರ್‍ಗೆ ಮನವಿ ಪತ್ರ ಸಲ್ಲಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಶರಬಣ್ಣ ರಸ್ತಾಪುರ ಮಾತನಾಡಿ, ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸಿಗಿ ತಾಲ್ಲೂಕಿನ ಅಗತೀರ್ಥ ಗ್ರಾಮದ ಮುಖಂಡನೊಬ್ಬ ಅದೇ ಗ್ರಾಮದ ಕುರುಬ ಸಮಾಜದ ಮುಖಂಡನ ಕುಟುಂಬದವರ ಮೇಲೆ ಅ.11 ರಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಈ ವಿಚಾರವಾಗಿ ಅ.13 ರಂದು ಬಾಬಾಗೌಡ ಕರೆ ಮಾಡಿ ಸಮಾಜದ ಗುರುಗಳಿಗೆ ಮತ್ತು ಕುಟುಂಬದವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜಾತಿ ಗಲಭೆಗೆ ಪ್ರಚೋದನೆ ನೀಡಿದ್ದಾನೆ. ಈ ಕುರಿತು ದೂರು ನೀಡಿದರು ಸಹ ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕುರುಬ ಸಮಾಜದ ಗುರುಗಳು ಮತ್ತು ಕುರುಬ ಸಮಾಜದ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ ಬಾಬಾಗೌಡನನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರ ಸಂಘದ ತಾಲೂಕಾಧ್ಯಕ್ಷ ರವಿ ರಾಜಾಪುರ ಮಾತನಾಡಿ, ಬಾಬಾಗೌಡ ಎನ್ನುವ ವ್ಯಕ್ತಿ ಕುರುಬ ಸಮಾಜದ ಗುರುಗಳ ಬಗ್ಗೆ ನಾಲಿಗೆ ಹಿಡಿತವಿಲ್ಲದೇ ಅವಹೇಳನಕಾರಿಯಾಗಿ ಮಾತನಾಡಿದ್ದು ಖಂಡನೀಯವಾದದ್ದು. ಕೂಡಲೇ ಬಾಬಾಗೌಡನನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಿಂದ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು ಪರದಾಡುವ ಸ್ಥತಿ ಉಂಟಾಯಿತು.
ಈ ಸಂದರ್ಭದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ಮಹಾಮಂಡಳಿ ನಿರ್ದೇಶಕ ಶಾಂತಗೌಡ ನಾಗನಟಗಿ, ಭೀಕ್ಷಣಗೌಡ ಕಾಡಂಗೇರ, ದೇವಿಂದ್ರಪ್ಪ ನಾಶಿ, ಮಲ್ಲಿಕಾರ್ಜುನ , ಭೀಮಣಗೌಡ ದರಿಯಾಪುರ, ರಾಯಪ್ಪ ಚಲಾವಾದಿ, ಸೀನು ನಾಶಿ, ಶರಣು ಮೇಟಿ, ದೇವು ಮೇಟಿ, ದೇವು ಭೀ ಗುಡಿ, ಮುನಿಯಪ್ಪಗೌಡ ನಾಗನಟಗಿ, ಚೆನ್ನಕೇಶವ ಗೌಡ ಹೊಸಕೇರ, ನಿಂಗಣ್ಣ ಟಣಕೇದಾರ, ಮಾಳಪ್ಪ ಹಳಿಸಗರ, ಹಣಮಂತ್ರಾಯ ದೊಡ್ಡಸಗರ, ಮಹೇಶ ರಸ್ತಾಪುರ, ಮರ್ಧಾನಿ ಸಲಾದಪೂರ, ಈಶ್ವರ ದರಿಯಾಪುರ, ಸೋಮಣ್ಣಗೌಡ ಕಾಡಂಗೇರ, ದೇವು ರಾಕಂಗೇರ, ಸುನೀಲ್ ಕಂದಕೂರ, ಮಾಳಪ್ಪ ಗಂಗನಾಳ, ಬಸ್ಸು ಹಳಿಸಗರ, ಭೀಮಶಂಕರ ವಿಭೂತಿಹಳ್ಳಿ, ಸಮಾಜದ ಮುಖಂಡರು, ಸಂಘಟನೆಯ ಪದಾಧಿಕಾರಿಗಳು ಇದ್ದರು.

Related