ದಲಿತಪರ ಸಂಘಟನೆಗಳಿಂದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿಗೆ ಬೆಂಬಲ: ಆರ್ ಎಂ ಎನ್ ರಮೇಶ್

ದಲಿತಪರ ಸಂಘಟನೆಗಳಿಂದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿಗೆ ಬೆಂಬಲ: ಆರ್ ಎಂ ಎನ್ ರಮೇಶ್

ಬೊಮ್ಮನಹಳ್ಳಿ: ಸಂವಿಧಾನ ಕಾಯ್ದೆ ತಿದ್ದುಪಡಿಯನ್ನು ನರೇಂದ್ರ ಮೋದಿಯವರು ಬದಲಾಯಿಸಿದ್ದೇನೆಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಸಂವಿಧಾನ ಕಾಯ್ದೆಯನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನವನ್ನು ಬದಲಾಯಿಸಿ, ವರ್ಣಾಶ್ರಮ ಪದ್ದತಿಯನ್ನು ಜಾರಿಗೊಳಿಸುವ ಗುಪ್ತ ಅಜೆಂಡಾದೊಂದಿಗೆ ಮತ್ತೆ ಚುನಾವಣೆಯನ್ನು ಗೆಲ್ಲುವ ಹವಣಿಕೆಯಲ್ಲಿರುವ ಬಿಜೆಪಿಗೆ ಈ ಬಾರಿ ದಲಿತರು ಮತ ಚಲಾಯಿಸುವುದಿಲ್ಲ ಎಂದು ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಆರ್.ಎಂ.ಎನ್.ರಮೇಶ್ ಹೇಳಿದರು.

ಬುಧವಾರ ಹೆಚ್ಎಸ್ಆರ್ ಬಡಾವಣೆಯಲ್ಲಿ ‘ಮೋದಿ ಆಳ್ವಿಕೆ ವಿರುದ್ಧ ಜನತಾ ಆರೋಪ ಪಟ್ಟಿ’ ಬಿಡುಗಡೆ ಮಾಡಿ ಮಾತನಾಡಿದರು.

ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಿ ಸರ್ವಾಧಿಕಾರದತ್ತ ಹೋಗುತ್ತಿರುವ ಬಿಜೆಪಿಯ ನಡೆ ಅತ್ಯಂತ ಅಪಾಯಕಾರಿಯಾದುದು. ಸಂಸದೀಯ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಹೀಗಾಗಿ ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರದಂತೆ ನಾವು ತಡೆಯುತ್ತೇವೆ ಎಂದರು.

‘ಬಹುಜನ ಸಂಘರ್ಷ ಸಮಿತಿಯು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿತ್ತು. ಹೀಗಾಗಿ ಈ ಬಾರಿಯೂ ಬಿಜೆಪಿ ಮೈತ್ರಿಕೂಟವನ್ನು ಬೆಂಬಲಿಸುತ್ತದೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ. ಜೆಡಿಎಸ್ ಸದ್ಯ ಕೋಮುವಾದಿ, ಫ್ಯಾಸಿಸ್ಟ್ ಶಕ್ತಿಗಳ ಜತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ನಾವು ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇವೆ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತೇವೆ’ ಎಂದರು.

‘ರಾಜ್ಯ ಮಟ್ಟದಲ್ಲಿ ಸಂಯುಕ್ತ ಹೋರಾಟ ಸಮಿತಿ ಮತ್ತು ಜನಾಂದೋಲನಗಳ ಮಹಾ ಮೈತ್ರಿಯ ಭಾಗವಾಗಿದ್ದು, ರಾಜ್ಯಾದ್ಯಂತ ಕಾಂಗ್ರೆಸ್ ಗೆ ಬೇಷರತ್ ಬೆಂಬಲ ನೀಡುತ್ತೇವೆ’ ಎಂದರು.

ಈ ಸಂದರ್ಭದಲ್ಲಿ ದಲಿತ ಸೇವಾ ಸಮಿತಿ ರಾಜ್ಯಾಧ್ಯಕ್ಷ ಚಂದ್ರಪ್ಪ, ಬಹುಜನ ದಲಿತ ಸಂಘರ್ಷ ಸಮಿತಿ ಮುಖಂಡರಾದ ರಾಮಚಂದ್ರ, ರವಿಕುಮಾರ್, ಮಾಲತಿ ನಂದೀಶ್, ಮುರಳಿ ವೆಂಕಟೇಶ್, ಅಗರ ಶಂಕರ್, ಮೀನಾಕ್ಷಿ, ಸುಶೀಲಾ ಕುಮಾರಿ ಇದ್ದರು.

Related