ವಿದ್ಯುತ್ ಕಂಬ ಶಿಫ್ಟಿಂಗ್ ಕಾಮಗಾರಿ ಕಳಪೆ

ವಿದ್ಯುತ್ ಕಂಬ ಶಿಫ್ಟಿಂಗ್ ಕಾಮಗಾರಿ ಕಳಪೆ

ಹುಳಿಯಾರು:ರಾಷ್ಟ್ರೀಯಹೆದ್ದಾರಿ 234 ಕಾಮಗಾರಿಗಾಗಿ ಮಾಡುತ್ತಿರುವ ವಿದ್ಯುತ್ ಕಂಬಗಳ ಶಿಫ್ಟಿಂಗ್ ಕಾಮಗಾರಿಯು ಕಳಪೆಯಿಂದ ಕೂಡಿದ್ದು ಭಾರಿ ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹುಳಿಯಾರು ಎಣ್ಣೇಗೆರೆ ಮಾರ್ಗದಲ್ಲಿ ಎನ್‌ಎಚ್234 ರಸ್ತೆ ಅಭಿವೃದ್ಧಿ ಕಾಮಗಾರಿಯು ನಡೆಯುತ್ತಿದ್ದು ಇದಕ್ಕಾಗಿ ಸುಮಾರು ಆರುತಿಂಗಳಿಂದ ವಾರಕ್ಕೆರಡು ದಿನ ಎಲ್‌ಸಿ ಪಡೆದು 11 ಕೆವಿ ಮಾರ್ಗದ ಶಿಫ್ಟಿಂಗ್ ಕೆಲಸ ಮಾಡುತ್ತಿದ್ದಾರೆ.
ಹೀಗೆ ವಿದ್ಯುತ್ ವ್ಯತ್ಯಯ ಮಾಡಿ ನೂರಾರು ಹಳ್ಳಿಗಳ ಸಾವಿರಾರು ಜನರಿಗೆ ತೊಂದರೆ ಕೊಟ್ಟು ಮಾಡುತ್ತಿರುವ ಕಾಮಗಾರಿ ಸಂಪೂರ್ಣವಾಗಿ ಕಳಪೆ ಕಾಮಗಾರಿ ಮಾಡಲಾಗುತ್ತಿದೆ. ಪರಿಣಾಮ ಶುಕ್ರವಾರ ರಾತ್ರಿ ಬಂದ ಸಣ್ಣ ಮಳೆಗೆ ಹುಳಿಯಾರು ಮತ್ತು ಕೋರಗೆರೆ ಮಧ್ಯೆ 11 ಕೆವಿ ಕಂಬಗಳು ನೆಲಕ್ಕುರುಳಿವೆ.
ಅದೃಷ್ಟವಶತ್ ಯಾವುದೇ ಅವಘಡಗಳು ಜರುಗಿಲ್ಲ. ಆದರೆ ಇನ್ನೂ ಶಿಫ್ಟಿಂಗ್ ಕೆಲಸ ಬಾಕಿ ಇದ್ದ ಕಾರಣದಿಂದ ಗುತ್ತಿಗೆದಾರರು ಮತ್ತು ಕೆಲಸಗಾರರು ಸ್ಥಳದಲ್ಲೇ ಇದ್ದ ಕಾರಣ ಮರುದಿನ ಬಿದ್ದ ಕಂಬಗಳನ್ನು ಪುನಃ ನಿಲ್ಲಿಸಿದ್ದಾರೆ. ಕಾಮಗಾರಿ ಪೂರ್ಣ ಮುಗಿಸಿ ಕೆಲಸಗಾರರೆಲ್ಲರೂ ತೆರಳಿದ ಮೇಲೆ ವಾಹನಗಳು ಓಡಾಡುವಾಗ ಕಂಬಗಳು ಉರುಳಿದರೆ ಗತಿ ಏನು ಎನ್ನುವ ಪ್ರಶ್ನೆ ಕಾಡಿದೆ.
ಹಾಗಾಗಿ ಅಧಿಕಾರಿಗಳಲ್ಲಿ ತಕ್ಷಣ ವಿದ್ಯುತ್ ಕಂಬಗಳ ಶಿಫ್ಟಿಂಗ್ ಕಾಮಗಾರಿಯನ್ನು ಖುದ್ದು ವೀಕ್ಷಿಸಿ ಲೈನ್ ಶಿಫ್ಟಿಂಗ್ ಮಾಡುತ್ತಿರುವ ಕಂಟ್ರಾಕ್ಟರ್ ಮತ್ತು ಕಂಪನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ. ಅಲ್ಲದೆ ಪ್ರತಿ ಕಂಬಗಳಿಗೂ ಕಾಂಕ್ರಿಟ್ ಹಾಕುವಂತೆ ಸೂಚಿಸಿ ಗುಣಮಟ್ಟ ಕಾಮವಾರಿ ಕಾಪಾಡುವಂತೆ ತಿಳಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

Related