ನಳಗಳಲ್ಲಿ ಬರುತ್ತಿದೆ ಚರಂಡಿ ನೀರು

ನಳಗಳಲ್ಲಿ ಬರುತ್ತಿದೆ ಚರಂಡಿ ನೀರು

ಕಂಪ್ಲಿ: ಸಾರ್ವಜನಿಕರು ಪ್ರತಿದಿನ ಉಪಯೋಗಿಸುವ, ಗ್ರಾ.ಪಂ.ನವರು ಸರಬರಾಜು ಮಾಡುವ ನಳದಲ್ಲಿ ಕೊಳಚೆ ಮಿಶ್ರಿತ ನೀರು ಪೂರೈಕೆಯಾಗುತ್ತಿದ್ದು, ಈಗಾಗಲೇ ಮಹಾಮಾರಿ ಕೊರೋನಾ ಸೋಂಕು ಹರಡುತ್ತಿರುವುದರಿಂದ ಭಯದಲ್ಲಿ ಜೀವನ ಸಾಗಿಸುತ್ತಿರುವ ಗ್ರಾಮಸ್ಥರು ಇದೀಗ ಕೊಳಚೆ ನೀರಿನಿಂದಾಗಿ ಸಾಂಕ್ರಾಮಿಕ ರೋಗದ ಭೀತಿಯನ್ನು ಗ್ರಾಮದ ಜನತೆ ಅನುಭವಿಸುತ್ತಿದ್ದಾರೆ.

ತಾಲ್ಲೂಕಿನ ಸುಗ್ಗೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಮಾವಿನಹಳ್ಳಿ ಗ್ರಾಮದ ಮಹಾಂಕಾಳಮ್ಮ ಕಟ್ಟೆ ಬಳಿ ಇರುವ ನಳಗಳಲ್ಲಿ ಕೊಳಚೆ ಮಿಶ್ರಿತ ನೀರು ಸರಬರಾಜು ಆಗುತ್ತಿದ್ದು, ಸ್ಥಳೀಯರಲ್ಲಿ ರೋಗದ ಭೀತಿ ಆವರಿಸಿದೆ. ಈ ಗ್ರಾಮದ ಸುಮಾರು ೫೦ಕ್ಕೂ ಅಧಿಕ ನಳಗಳಲ್ಲಿ ಚರಂಡಿ ನೀರು ಮಿಶ್ರಿತ ನೀರಿನೊಂದಿಗೆ ಹುಳುಗಳು ಬರುತ್ತಿವೆ. ಕಳೆದ ೧೫ ದಿನಗಳಿಂದ ಇದೇ ರೀತಿ ಗಲೀಜು ನೀರು ಪೂರೈಕೆಯಾಗುತ್ತಿದ್ದು, ಗ್ರಾಮದಲ್ಲಿ ಕುಡಿಯುವ ನೀರು ಬಿಡುವ ನೀರಗಂಟಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ನಿತ್ಯ ಇದೇ ನೀರು ಪೂರೈಕೆಯಾಗುತ್ತಿದ್ದು, ಅನಿವಾರ್ಯವಾಗಿ ಇದೇ ನಿರನ್ನು ಬಳಸುತ್ತಿದ್ದು, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೆಲವರು ಇದೇ ನೀರನ್ನು ಕುಡಿಯುತ್ತಿದ್ದಾರೆ. ಗ್ರಾಮದ ಜನತೆಗೆ ಗ್ರಾ.ಪಂ.ಆಡಳಿತ ಮಂಡಳಿಯವರು ಶುದ್ಧೀಕರಿಸಿದ ಕುಡಿಯುವ ನೀರನ್ನು ಒದಗಿಸಬೇಕೆಂದು ಗ್ರಾಮದ ಮದಿರೆ ಸಿದ್ದಮ್ಮ, ಹೇಮೇಶ್ವರ, ಹೊನ್ನೂರಮ್ಮ, ರಾಮಕ್ಕ, ಶ್ರೀದೇವಿ, ವೀರೇಶ್ ವಸಂತಮ್ಮ, ಮದಿರೆ ಹೊನ್ನೂರಮ್ಮ ಸೇರಿದಂತೆ ಇತರರು ಒತ್ತಾಯಿಸಿದರು.

ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ನೀರಿನ ಪೈಪ್ ಒಡೆದು ಚರಂಡಿ ನೀರು ಸೇರಿರುವ ಸಾಧ್ಯತೆಗಳಿದ್ದು, ಇದನ್ನು ಪತ್ತೆ ಹಚ್ಚಿ ಪೈಪ್ ಲೈನ್ ಸರಿಪಡಿಸಿ ಶುದ್ಧ ಕುಡಿಯುವ ನೀರನ್ನು ಶೀಘ್ರವಾಗಿ ಬಿಡಲಾಗುವುದು ಎಂದು ಸುಗ್ಗೇನಹಳ್ಳಿ ಗ್ರಾ.ಪಂ.ಪಿಡಿಒ ಅಪರಂಜಿ ತಿಳಿಸಿದರು.

Related