ಕೇಂದ್ರದ ಬಿಜೆಪಿ ನಾಯಕರಿಗೆ ರಾಜ್ಯಕ್ಕೆ ಬರಲು ಯಾವುದೇ ನೈತಿಕತೆ: ರಾಮಲಿಂಗಾರೆಡ್ಡಿ

ಕೇಂದ್ರದ ಬಿಜೆಪಿ ನಾಯಕರಿಗೆ ರಾಜ್ಯಕ್ಕೆ ಬರಲು ಯಾವುದೇ ನೈತಿಕತೆ: ರಾಮಲಿಂಗಾರೆಡ್ಡಿ

ಬೆಂಗಳೂರು: ಕೇಂದ್ರ ಬಿಜೆಪಿ ಸಚಿವರು ಮತ್ತು ನಾಯಕರುಗಳು ಕರ್ನಾಟಕ ರಾಜ್ಯಕ್ಕೆ ಬರಲು ಯಾವುದೇ ನೈತಿಕತೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರೆ ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಸಚಿವರು ಇಂದು ವಿಧಾನಸೌಧ ಮುಂಭಾಗ ಇರುವ ಗಾಂಧಿ ಪ್ರತಿಮೆಯ ಎದುರು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾಗಿರುವ ಬರ ಪರಿಹಾರದಲ್ಲಿ ತಾರತಮ್ಯವನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಧರಣಿಯಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ರಾಜ್ಯಕ್ಕೆ ನ್ಯಾಯಯುತವಾಗಿ ಸೇರಬೇಕಾದ ತೆರಿಗೆ ಹಣ ಮತ್ತು ಅನುದಾನದಲ್ಲಿ ತೀವ್ರ ಮೋಸ ಮಾಡಿದ್ದಾರೆ.

ಸುಮಾರು ಎಂಟು ತಿಂಗಳ ಹಿಂದೆ ಬರ ಅಧ್ಯಯನದ ವರದಿಯನ್ನು ನೀಡಿದ್ದರು ಸಹ ಈವರೆಗೆ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಸುಪ್ರೀಂ ಕೋರ್ಟ್ ಸಹ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದೆ.

ಪಾರಂಪರಿಕವಾಗಿ ಬರ ಪರಿಹಾರವನ್ನು ಸಮೀಕ್ಷೆ ನಡೆಸಿ ಕೆಲವೇ ದಿನಗಳಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಆದರೆ ಮೋದಿ ಸರ್ಕಾರ ರಾಜ್ಯದಿಂದ ಕೃಷಿ ಸಚಿವರು ಮತ್ತು ಮುಖ್ಯಮಂತ್ರಿಗಳು ಅನುದಾನವನ್ನು ಕೇಳಲು ಹೋದರು ಅವರಿಗೆ ಸಮಯವನ್ನು ಕೊಡದೆ, ಅನುದಾನವನ್ನು ಬಿಡುಗಡೆಗೊಳಿಸುವುದಾಗಿ ಸುಳ್ಳು ಭರವಸೆಯನ್ನು ಕೊಟ್ಟು ಕಳಿಸುತ್ತಿದ್ದಾರೆ. ಇದು ಬಿಜೆಪಿ ಸರ್ಕಾರಕ್ಕೆ ಮತ್ತು ಮೋದಿಯವರಿಗೆ ರಾಜ್ಯದ ರೈತರ ಮೇಲೆ ಮತ್ತು ರಾಜ್ಯದ ಜನತೆ ಮೇಲೆ ಇರುವ ವಿಶ್ವಾಸ ಮತ್ತು ಪ್ರೀತಿ ಎಂದು ರಾಮಲಿಂಗ ರೆಡ್ಡಿ ಗುಡುಗಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಇವರು ರಾಜ್ಯಕ್ಕೆ ಬರುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ರೆಡ್ಡಿ ಅವರು,  ಗೋ ಬ್ಯಾಕ್ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು. ಅವರಿಗೆ ರಾಜ್ಯಕ್ಕೆ ಬರಲು ಯಾವುದೇ ನೈತಿಕ ಹಕ್ಕು ಇಲ್ಲ.

ಮೋದಿಯವರು ಇತ್ತೀಚೆಗೆ ಬೆಂಗಳೂರಿಗೆ ಬಂದಾಗ ಬೆಂಗಳೂರನ್ನು ಟ್ಯಾಂಕರ್ ಸಿಟಿ ಎಂದು ಸಂಬೋಧಿಸುತ್ತಾರೆ ಆದರೆ ಅವರ ತಪ್ಪುಗಳು ಮಾತ್ರ ಅವರಿಗೆ ಅರಿವಾಗುವುದಿಲ್ಲ. ಮೇಕೆದಾಟು ಕುರಿತು ವಿಸ್ತೃತ ವರದಿಗೆ ಐದು ವರ್ಷವಾದರೂ ಅನುಮೋದನೆ ನೀಡದೆ, ರಾಜ್ಯಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಿಕೊಳ್ಳಲು ಅನುಮತಿ ನೀಡದೆ ಬೆಂಗಳೂರನ್ನು ಟ್ಯಾಂಕರ್ ಸಿಟಿ ಎಂದು ಕರೆಯುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

Related