ಕೋವಿಡ್ ಕೇಂದ್ರದ ಅವ್ಯವಸ್ಥೆ ಬಿಚ್ಚಿಟ್ಟ ಸೋಂಕಿತರು

ಕೋವಿಡ್ ಕೇಂದ್ರದ ಅವ್ಯವಸ್ಥೆ ಬಿಚ್ಚಿಟ್ಟ ಸೋಂಕಿತರು

ಮುದ್ದೇಬಿಹಾಳ: ಕೊರೋನಾ ಸೋಂಕಿತರಿಗೆ ತೆರೆದಿರುವ ಕೋವಿಡ್ ಕೇರ್ ಕೇಂದ್ರದಲ್ಲಿನ ಅವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳ ಎದುರಿಗೆ ಸೋಂಕಿತರು ಅಳಲು ತೋಡಿಕೊಂಡ ಘಟನೆ ತಾಲ್ಲೂಕಿನ ಜಮ್ಮಲದಿನ್ನಿ ಗ್ರಾಮದ ಹೊರ ವಲಯದಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಕೇಂದ್ರದಲ್ಲಿ ಭಾನುವಾರ ನಡೆದಿದೆ. ತಾಲ್ಲೂಕಿನ ಜಮ್ಮಲದಿನ್ನಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ಮೊದಲು ಕ್ವಾರಂಟೈನ್ ಕೇಂದ್ರವನ್ನಾಗಿ ಮಾಡಿ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿತ್ತು.

ವಸತಿ ಶಾಲೆಯಲ್ಲಿ ಹೊಸ ಮಂಚ, ಬೆಡ್‌ಗಳ ಸೌಲಭ್ಯವಿದ್ದರೂ ಮೂಲಸೌಕರ್ಯಗಳನ್ನು ಒದಗಿಸುವುದಕ್ಕೆ ತೋರುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರದ ಅವ್ಯವಸ್ಥೆಯನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಇದು ಬೆಳಕಿಗೆ ಬರುತ್ತಿದ್ದಂತೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ತಹಶೀಲ್ದಾರ್ ಜಿ.ಎಸ್.ಮಳಗಿ, ತಾಲ್ಲೂಕು ಪಂಚಾಯಿತಿ ಇಓ ಶಶಿಕಾಂತ ಶಿವಪೂರೆ, ಡಾ.ಸತೀಶ ತಿವಾರಿ, ಕಂದಾಯ ನಿರೀಕ್ಷಕ ಡಿ.ಎಸ್.ತಳವಾರ ಮತ್ತಿತರರು ಸೋಂಕಿತರು ಮತ್ತು ಅವರ ಕುಟುಂಬ

ದವರಿಂದ ಸಮಸ್ಯೆ ಆಲಿಸಿದ್ದಾರೆ.

ಅಧಿಕಾರಿಗಳ ಎದುರು ದೂರುಗಳ ಸುರಿಮಳೆ:ಎಲ್ಲೆಂದರಲ್ಲಿ ಕಸದ ರಾಶಿ, ಗಬ್ಬು ನಾರುತ್ತಿರುವ ಶೌಚಾಲಯಗಳು, ಸರಿಯಾದ ನೀರಿನ ವ್ಯವಸ್ಥೆ ಇಲ್ಲದೇ ಮರ‍್ನಾಲ್ಕು ದಿನಗಳಿಂದ ಕೋವಿಡ್ ರೋಗಿಗಳು ಸ್ನಾನಕ್ಕೆ ಪರದಾಡುತ್ತಿದ್ದಾರೆ. ಮಳೆಗಾಲವಿದ್ದರೂ ಬಿಸಿನೀರಿನ ವ್ಯವಸ್ಥೆ ಇಲ್ಲ. ರೋಗಿಗಳು ಕೋವಿಡ್ ಸೆಂಟರ್‌ನಲ್ಲಿ ದಾಖಲಾಗುತ್ತಲೇ ಇಲ್ಲಿಯ ಅವ್ಯವಸ್ಥೆ ಕಂಡು ಸೆಂಟರ್​ನಿಂದ ಓಡಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಸರಿಗಷ್ಟೇ ಇಲ್ಲಿ ಶೌಚಾಲಯಗಳಿದ್ದು, ನೀರಿನ ವ್ಯವಸ್ಥೆ ಇಲ್ಲ, ಬಾಗಿಲುಗಳೂ ಸಮರ್ಪಕವಾಗಿಲ್ಲ.

ಮಹಿಳಾ, ಪುರುಷ ರೋಗಿಗಳಿಗೆ ಪ್ರತ್ಯೇಕವಾದ ಶೌಚಾಲಯ ವ್ಯವಸ್ಥೆ ಇಲ್ಲ. ಸ್ನಾನ, ಇತರೆ ಬಳಕೆಗೆ ನೀರು ಬೇಕಾದರೆ ರೋಗಿಗಳು ಖುದ್ದು ಕೋವಿಡ್ ಸೆಂಟರ್ ಮೇಲೆ ಮಹಡಿಯಲ್ಲಿರುವ ನೀರಿನ ಟ್ಯಾಂಕ್ ಮೂಲಕ ತುಂಬಿಕೊಳ್ಳಬೇಕಿದೆ. ವಯೋವೃದ್ಧ ರೋಗಿಗಳ ಸಹಾಯಕ್ಕೆ ಯಾವ ಸಿಬ್ಬಂದಿಯೂ ಇಲ್ಲದೇ ಇಲ್ಲಿನ ರೋಗಿಗಳೇ ನೆರವಾಗುತ್ತಿದ್ದಾರೆ.

 

Related