ಮಾದರಿ ಕಾರ್ಯ; ವಲಸಿಗ ಕಾರ್ಮಿಕರನ್ನು ಊರಿಗೆ ತಲುಪಿಸುವೆ-ನಡಹಳ್ಳಿ

ಮಾದರಿ ಕಾರ್ಯ; ವಲಸಿಗ ಕಾರ್ಮಿಕರನ್ನು ಊರಿಗೆ ತಲುಪಿಸುವೆ-ನಡಹಳ್ಳಿ

ಮುದ್ದೇಬಿಹಾಳ : ಅನ್ಯ ಜಿಲ್ಲೆ ಹಾಗೂ ರಾಜ್ಯಗಳಿಗೆ ದುಡಿಯಲು ಹೋದ ಕೂಲಿ ಕಾರ್ಮಿಕರನ್ನು ಗೌರವಯುತವಾಗಿ ಅವರ ಊರಿಗೆ ತಲುಪಿಸುವ ಕಾರ್ಯವನ್ನು ತಾಲೂಕಾಡಳಿತದ ಸಹಯೋಗದಿಂದ ಮಾಡಲಾಗುವುದು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ಅಂತರ್‍ಜಿಲ್ಲೆಯಿಂದ ಆಗಮಿಸಿದ್ದ ಮತಕ್ಷೇತ್ರದ ವಿವಿಧ ಹಳ್ಳಿಗಳ ಕೂಲಿಕಾರ್ಮಿಕರಿಗೆ ಅಲ್ಪೋಪಹಾರ,ದಿನಸಿ ಕಿಟ್ ಹಾಗೂ ಚಹಾದ ವ್ಯವಸ್ಥೆ ಕಲ್ಪಿಸಿದ ಬಳಿಕ ಅವರು ಮಾತನಾಡಿದರು.ಬಡತದನ ಕಷ್ಟ ಏನೆಂಬುದು ನನಗೆ ಗೊತ್ತಿದೆ.ಇದನ್ನು ಮಾಡುತ್ತಿರುವುದು ಯಾವುದೇ ಪ್ರಚಾರಕ್ಕೋಸ್ಕರ ಅಲ್ಲ.ಇಂತಹ ಸಂದಿಗ್ಧ ಸಮಯದಲ್ಲಿ ಜನರ ಕಷ್ಟದಲ್ಲಿ ಆಗದೇ ಇದ್ದರೆ ಅದೆಷ್ಟು ಆಸ್ತಿ ಮಾಡಿದ್ದರೂ ವ್ಯರ್ಥವೇ ಎಂದು ಹೇಳಿದರು.

ಅಂತರ್ ಜಿಲ್ಲೆಯಿಂದ ಆಗಮಿಸುವ ಕಾರ್ಮಿಕರಿಗೆ ಈಗಾಗಲೇ ನೋಂದಾಯಿಸಿ ದಿನಸಿ ಕಿಟ್ ನೀಡಿ ಅವರನ್ನು ಊರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದೇವೆ.ಸರಕಾರ ಅಂತರ್‍ರಾಜ್ಯದಲ್ಲಿರುವ ಕಾರ್ಮಿಕರನ್ನು,ವಿದ್ಯಾರ್ಥಿಗಳನ್ನು ಕರೆತರಲು ಆದೇಶಿಸಿದೆ.ಗೋವಾ,.ಮಹಾರಾಷ್ಷ್ರ,ಆಂಧ್ರ ಮತ್ತಿತರೆಡೆಗಳಲ್ಲಿ ದುಡಿಯಲು ಹೋಗಿರುವ ನಮ್ಮ ಕ್ಷೇತ್ರದ 10 ಸಾವಿರಕ್ಕೂ ಅಧಿಕ ಸಂಖ್ಯೆಯ ಕಾರ್ಮಿಕರನ್ನು ಕರೆತರಲು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ.ಬೇರೆ ರಾಜ್ಯಗಳಿಂದ ಬರುವ ಕ್ಷೇತ್ರದ ಕೂಲಿಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಇವೆಲ್ಲರಿಗೂ ಶಾಸಕರು ದಿನಸಿ ಕಿಟ್,ಬಿಸ್ಕೆಟ್ ನೀಡಿ ಅವರ ಊರಿಗೆ ಕಳಿಸಿಕೊಟ್ಟರು.

ಈ ವೇಳೆ ಶಾಸಕರ ಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ,ಸಹೋದರ ಶಾಂತಗೌಡ ಪಾಟೀಲ ನಡಹಳ್ಳಿ,ತಹಸೀಲ್ದಾರ್ ಜಿ.ಎಸ್.ಮಳಗಿ,ಸಿಪಿಐ ಆನಂದ ವಾಘಮೋಡೆ,ಮುಖ್ಯಾಧಿಕಾರಿ ಗೋಪಾಲ ಕಾಸೆ,ಸಾರಿಗೆ ವ್ಯವಸ್ಥಾಪಕ ರಾಹುಲ್ ಹೊನಸೂರೆ,ಡಾ.ಸತೀಶ ತಿವಾರಿ,ಪಿಎಸೈ ಮಲ್ಲಪ್ಪ ಮಡ್ಡಿ,ಆರೋಗ್ಯ ಸಹಾಯಕರಾದ ಎಂ.ಎಸ್.ಗೌಡರ,ಮಹಾದೇವಿ ಟಕ್ಕಳಕಿ,ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ,ಬಸಮ್ಮ ಸಿದರೆಡ್ಡಿ,ಯುವ ಮುಖಂಡ ಅಶೋಕ ರಾಠೋಡ,ಇಕ್ಬಾಲ್ ಮೂಲಿಮನಿ,ಶಿವು ಕನ್ನೊಳ್ಳಿ,ಮಂಜುನಾಥ ಅಬ್ಬಿಹಾಳಮಠ ಮೊದಲಾದವರು ಇದ್ದರು.

ಕಣ್ಣೀರು ಹಾಕಿದ ವೃದ್ಧೆ:

ಮಂಗಳೂರಿನಿಂದ ಮುದ್ದೇಬಿಹಾಳಕ್ಕೆ ಆಗಮಿಸಿದ್ದ ತಾಲೂಕಿನ ದೇವೂರ ಗ್ರಾಮದ ರುದ್ರಮ್ಮ ಪೂಜಾರಿ ಎಂಬುವರು ಈ ಜಡ್ಡು ಬಂದು ಎಲ್ಲಿ ಊರ ಮಾರಿ ಕಾಣ್ಸತೈತೆ ಇಲ್ಲ ಅನ್ನಂಗ ಆಗಿತ್ರಿ.ಆದ್ರ ನಮ್ಮ ನಡಹಳ್ಳಿ ಗೌಡ್ರು ನಮ್ಮನ್ನು ಕರಸ್ಕೊಂಡು ಊರಿಗೆ ಕಳ್ಸಾಕ ಬಸ್ಸಿನ ವ್ಯವಸ್ಥಾ ಮಾಡ್ಸ್ಯಾರು.ಇಲ್ಲಂದ್ರ ನಮ್ಮೂರ ಮಾರಿನ ನಾನು ನೋಡತಿನ ಇಲ್ಲ ಅನ್ನಂಗಾಗಿತ್ರಿ ಎಂದು ಕಣ್ಣೀರು ಹಾಕಿದರು.

200ಕ್ಕೂ ಅಧಿಕ ಕಾರ್ಮಿಕರು:

ಮಂಗಳೂರಿನಿಂದ ಗುರುವಾರ ಒಟ್ಟು ಏಳು ಬಸ್‍ಗಳಲ್ಲಿ ಅಂದಾಜು 200 ಕಾರ್ಮಿಕರು ಮುದ್ದೇಬಿಹಾಳ ಬಸ್ ನಿಲ್ದಾಣಕ್ಕೆ ಆಗಮಿಸಿದರು.ತಾಲೂಕಿನ ನಾಗರಬೆಟ್ಟ, ನಾಲತವಾಡ, ಶಿರೋಳ, ಅರಸನಾಳ, ಡೊಂಕಮಡು, ಖಿಲಾರಹಟ್ಟಿ,ತಿಳಗೂಳ,ಬಿಜ್ಜೂರ,ಹಿರೂರ,ಕೋಳೂರ,ಸಾಸನೂರ,ಬಂಗಾರಗುಂಡ,ದೇವೂರ,ಬಳವಾಟ ಸೇರಿದಂತೆ ಹಲವು ಗ್ರಾಮಗಳ ಕಾರ್ಮಿಕರು ಆಗಮಿಸಿದರು.

ಜಿಲ್ಲೆಯಲ್ಲಿ ಮಾದರಿ ಕೆಲಸ:
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತಾಲೂಕಾಡಳಿತದ ಅಧಿಕಾರಿಗಳ ಸಹಯೋಗದೊಂದಿಗೆ ಕೈಗೊಂಡಿರುವ ಕ್ರಮ ಇಡೀ ಜಿಲ್ಲೆಯಲ್ಲಿಯೇ ಮಾದರಿಯಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.ಬಸ್ ನಿಲ್ದಾಣದಲ್ಲಿಯೇ ಕುಡಿಯುವುದಕ್ಕೆ ನೀರು,ಬಿಸ್ಕೆಟ್,ದಿನಸಿ ಕಿಟ್ ವಿತರಿಸಿ ಊರಿಗೆ ತಲುಪಿಸಲು ಸ್ವತಃ ಶಾಸಕರೇ ಮುಂದೆ ನಿಂತು ಎಲ್ಲ ಕಾರ್ಯಗಳಿಗೆ ಪ್ರೇರಣೆ ನೀಡುತ್ತಿರುವುದು ಕಾರ್ಮಿಕರ ಮೆಚ್ಚುಗೆಗೆ ಕಾರಣವಾಗಿದೆ.

Related