ಅಮೇರಿಕಾದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಳ..!

ಅಮೇರಿಕಾದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಳ..!

ಅಮೆರಿಕದಲ್ಲಿ ಪತ್ತೆಯಾಗಿರುವ ಬಹುತೇಕ ಪ್ರಕರಣಗಳು ಪ್ರಯಾಣದಿಂದ ತಗುಲಿದ ಪ್ರಕರಣಗಳಾಗಿದ್ದರೂ ತಜ್ಞರ ಪ್ರಕಾರ ಸಮುದಾಯ ಹರಡುವಿಕೆಯೂ ತನ್ನ ಕೊಡುಗೆ ನೀಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋಂಕಿತ ವ್ಯಕ್ತಿಯೊಂದಿಗೆ ಅತಿ ನಿಕಟ ಸಂಪರ್ಕ ಹೊಂದಿರುವವರಲ್ಲೂ ಸಹ ಈ ಸೋಂಕು ಪತ್ತೆಯಾಗಿರುವುದೇ ತಜ್ಞರ ಈ ಅಭಿಪ್ರಾಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಜಗತ್ತು ಮಹಾಮಾರಿ ಕೊರೋನಾ ವೈರಾಣುವಿನ ಬಿಗಿ ಮುಷ್ಠಿಗೆ ಸಿಲುಕಿ ನಲುಗಿತ್ತು. ಈಗಷ್ಟೆ ಅದರ ಪ್ರಭಾವ ಕಡಿಮೆಯಾಗುತ್ತಿದ್ದು ಜಗತ್ತು ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿದೆ. ಅಂಥದ್ದರಲ್ಲಿ ಅಮೆರಿಕದಲ್ಲಿ ಮಂಕಿಪಾಕ್ಸ್  ವೈರಾಣು ಹರಡುತ್ತಿದ್ದು ಮತ್ತೆ ಆತಂಕದ ಮನೆ ಮಾಡುವಂತೆ ಮಾಡಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಪ್ರಸ್ತುತ ಅಂಕಿ-ಅಂಶಗಳ ಪ್ರಕಾರ ಅಮೆರಿಕದ 43 ಪ್ರದೇಶಗಳಲ್ಲಿ ಈ ವೈರಾಣು ಹರಡಿದೆ ಎಂದು ತಿಳಿದುಬಂದಿದೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಪ್ರಕಾರ, ಈಗಾಗಲೇ ಅಮೆರಿಕದಲ್ಲಿ ಸಾವಿರಕ್ಕೂ ಹೆಚ್ಚು ಮಂಕಿಪಾಕ್ಸ್ ಅಥವಾ ಆರ್ಥೋಪಾಕ್ಸ್ ವೈರಾಣು ತಗುಲಿದ ಪ್ರಕರಣಗಳು ದೃಢಪಟ್ಟಿವೆ. ಇನ್ನು, ಜಗತ್ತಿನಾದ್ಯಂತ ಈ ಬಗ್ಗೆ ತಿಳಿಯುವುದಾದರೆ ಒಟ್ಟು 59 ದೇಶಗಳಿಂದ 11,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ ಎನ್ನಲಾಗಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಅತಿ ಹೆಚ್ಚಿನ ಅಂದರೆ 161 ಮಂಕಿಪಾಕ್ಸ್ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ತದನಂತರದ ಸ್ಥಾನದಲ್ಲಿ ನ್ಯೂಯಾರ್ಕ್ ಹಾಗೂ ಇಲ್ಲಿನಾಯಿಸ್ ನಗರಗಳಿದ್ದು ಎರಡೂ ನಗರಗಳಲ್ಲಿ ಕ್ರಮವಾಗಿ 159 ಹಾಗೂ 152 ಪ್ರಕರಣಗಳು ದಾಖಲಾದ ಬಗ್ಗೆ ವರದಿಯಾಗಿದೆ.

Related