ಮೊಬೈಲ್ ಕೋವಿಡ್ ತಪಾಸಣಾ ವಾಹನಗಳಿಗೆ ಚಾಲನೆ

ಮೊಬೈಲ್ ಕೋವಿಡ್ ತಪಾಸಣಾ ವಾಹನಗಳಿಗೆ ಚಾಲನೆ

ಕೊರೋನಾ ಸೋಂಕು ಬೊಮ್ಮನಹಳ್ಳಿ ವಲಯದಲ್ಲಿ ಹರಡುವುದನ್ನು ತಡೆಗಟ್ಟಲು ಶೀಘ್ರ ಕಾರ್ಯಾಚರಣೆಯನ್ನು ಬಿರುಸುಗೊಳಿಸಲಾಗಿದೆ. ಮೊಬೈಲ್ ಕೋವಿಡ್ ತಪಾಸಣಾ ವಾಹನಗಳಿಗೆ ಭಾನುವಾರ ಕೋಡಿಚಿಕ್ಕನಹಳ್ಳಿಯಲ್ಲಿ ಶಾಸಕ ಎಂ. ಸತೀಶ್ ರೆಡ್ಡಿ ಚಾಲನೆ ನೀಡಿದರು. ಪ್ರತಿ ವಾರ್ಡ್ ನಲ್ಲಿ ಎರಡು ವಾಹನಗಳು ಜನರಿರುವೆಡೆಗೆ ತೆರಳಿ ತಪಾಸಣೆ ನಡೆಸಲಿವೆ. ಇವು ವಲಯದ ಹದಿನಾರು ವಾರ್ಡ್ ಗಳಲ್ಲೂ ಕಾರ್ಯಾಚರಿಸಲಿವೆ. ಈ ವಾಹನಗಳ ಮೂಲಕ ದಿನಕ್ಕೆ ೧೨೦೦ ಜನರ ತಪಾಸಣೆ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ವ್ಯಾಪಕವಾಗಿ ಪರೀಕ್ಷೆಗಳು ನಡೆಸುವುದರಿಂದಲೇ ಸೋಂಕು ಹರಡುವಿಕೆ ತಡೆಗಟ್ಟಲು ಸಾಧ್ಯವಿರುವುದರಿಂದ ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು. ಸೋಂಕು ಹರಡುವುದನ್ನು ತಡೆಗಟ್ಟುವುದು ಹಾಗೂ ಮರಣ ಪ್ರಮಾಣ ಕಡಿಮೆಗೊಳಿಸುವುದೇ ನಮ್ಮ ಗುರಿ ಎಂದರು.
ಶನಿವಾರ ನಡೆಸಿದ ತಪಾಸಣೆಯಲ್ಲಿ ಹೊಂಗಸAದ್ರ ವಾರ್ಡ್ ನಲ್ಲಿ ೫೬೪ ಜನ ತಪಾಸಣೆಗೆ ಒಳಪಟ್ಟವರಲ್ಲಿ ೪೩ ಜನರಿಗೆ ಸೋಂಕು ದೃಢಪಟ್ಟಿದೆ, ಉತ್ತರಹಳ್ಳಿ ವಾರ್ಡ್ ನಲ್ಲಿ ೫೪೪ ಜನರನ್ನು ತಪಾಸಣೆ ಮಾಡಲಾಗಿದ್ದು ೩೬ ಸೋಂಕಿತರು ಪತ್ತೆಯಾಗಿದ್ದಾರೆ ಎಂಬ ಮಾಹಿತಿಯನ್ನು ಬಿಬಿಎಂಪಿ ವಲಯದಿಂದ ಲಭ್ಯವಾಗಿದೆ.
‘ಸೋಂಕು ದೃಢಪಟ್ಟ ಸೋಂಕಿತರು ಯಾವುದೇ ರೋಗ ಲಕ್ಷಣಗಳು ಇಲ್ಲದಾಗಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದ್ದು, ಆನಂತರ ಗೃಹ ದಿಗ್ಬಂಧನದಲ್ಲಿ ಇರಬಹುದಾಗಿದೆ, ಸೋಂಕು ಹರಡುವಿಕೆಗೆ ತಡೆ ಹಾಕಲು ಇದು ಅನಿವಾರ್ಯ’ ಎಂದು ಬೊಮ್ಮನಹಳ್ಳಿ ಜಂಟಿ ಆಯುಕ್ತ ರಾಮಕೃಷ್ಣ ಮಾಹಿತಿ ನೀಡಿದರು.
‘ಪ್ರತಿ ವಾರ್ಡ್ ನಲ್ಲಿಯೂ ಸ್ವಯಂಸೇವಕ ತಂಡಗಳು ಆರೋಗ್ಯ ತಪಾಸಣೆ ನಡೆಸಲಿದ್ದು, ರೋಗ ಲಕ್ಷಣಗಳು ಕಂಡುಬAದಲ್ಲಿ ಅಂತಹವರ ಕುರಿತು ವಾಕಿಟಾಕಿ ಮೂಲಕ ವಾರ್ ರೂಂಗೆ ಮಾಹಿತಿ ರವಾನೆ ಆಗಲಿದೆ. ಎಲ್ಲಾ ಹದಿನಾರು ವಾರ್ ರೂಂಗಳ ಮಾಹಿತಿಯನ್ನು ಪ್ರತಿ ೨ ಗಂಟೆಗೆ ಒಮ್ಮೆ ಪ್ರಧಾನ ವಾರ್ ರೂಂಗೆ ಮಾಹಿತಿ ರವಾನೆ ಆಗಲಿದೆ’ ಎಂದು ಕೋವಿಡ್ ಉಸ್ತುವಾರಿ ಮಣಿವಣ್ಣನ್ ಹೇಳಿದರು.
ಮರಣ ಪ್ರಮಾಣ ತಗ್ಗಿಸುವುದು ನಮ್ಮ ಮೊದಲ ಆದ್ಯತೆ, ಹೀಗಾಗಿ ಸ್ವಯಂ ಸೇವಕರು ತಪಾಸಣೆಗಾಗಿ ಮನೆಗಳ ಬಳಿ ಬಂದಾಗ ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಕೃಷ್ಣಪ್ಪ ಹೇಳಿದರು. ಭಾನುವಾರ ಬೇಗೂರು ವಾರ್ಡ್ ನ ವಿಶ್ವಪ್ರಿಯ ಬಡಾವಣೆಯಲ್ಲಿ ಮೊಬೈಲ್ ಕೋವಿಡ್ ತಪಾಸಣಾ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.
‘ವಾರ್ ರೂಂ ಜತೆಗೆ ಕೋವಿಡ್ ಕಮಾಂಡ್ ರೂಂ, ವೈದ್ಯರ ತಂಡ, ಪ್ರಾಥಮಿಕ ಸಂಪರ್ಕಿತರ ಪತ್ತೆ ತಂಡಗಳು ಸಮಾನಾಂತರವಾಗಿ ಕಾರ್ಯಾಚರಣೆ ನಡೆಸಲಿವೆ, ಸೋಂಕು ತಡೆಗಟ್ಟವಲ್ಲಿ ಪರಿಣಾಮಕಾರಿ ಪ್ರಗತಿ ಸಾಧಿಸುವ ವಿಶ್ವಾಸ ಇದೆ’ ಎಂದು ಬೊಮ್ಮನಹಳ್ಳಿ ವಲಯ ಕೋವಿಡ್ ಉಸ್ತುವಾರಿಯಾಗಿರುವ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದರು.

Related