ಮಹಾಕವಿ ರನ್ನ ಚಿತ್ರಕ್ಕೆ ಸ್ಥಳ ಪರಿಶೀಲನೆ

ಮಹಾಕವಿ ರನ್ನ ಚಿತ್ರಕ್ಕೆ ಸ್ಥಳ ಪರಿಶೀಲನೆ

ಮುಧೋಳ:ರನ್ನ ಮಹಾಕವಿಯ ಕುರಿತು ಚಲನಚಿತ್ರ ನಿರ್ಮಿಸಲು ಸಿದ್ಧತೆ ನಡೆಸಿರುವ ಚಿತ್ರ ನಿರ್ದೇಶಕ, ಖ್ಯಾತ ಜಾನಪದ ಕಲಾವಿದ ಬೆಂಗಳೂರಿನ ದೇವರಾಜ್ ಡಿ. ಅವರು ಮುಧೋಳದ ಘೋರ್ಪಡೆ ಸಂಸ್ಥಾನದ ಅರಮನೆ, ರನ್ನ ಸ್ಮಾರಕ ಭವನ, ರನ್ನ ಸಾಂಸ್ಕೃತಿಕ ಭವನ, ಕನ್ನಡ ಸಾಹಿತ್ಯ ಪರಿಷತ್ ಭವನ, ವಾತ್ಸಲ್ಯಧಾಮ ಮತ್ತು ನಿರಾಣಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಚಿತ್ರೀಕರಣಕ್ಕಾಗಿ ಸ್ಥಳ ಪರಿಶೀಲನೆ ಮಾಡಿದರು.

ರನ್ನ ಕವಿಯ ಸಾಹಿತ್ಯ ಪೂರ್ಣ ಲಭಿಸಿದೆ. ಆದರೆ ಕವಿ ಜನಿಸಿದ ಮನೆ, ಸ್ಮಾರಕ, ಸಮಾಧಿ ಯಾವುದೂ ಲಭ್ಯವಿಲ್ಲ. ಆದ್ದರಿಂದ ಇಡೀ ಮುಧೋಳ ನಗರವನ್ನು ಕವಿಯ ಮನೆಯಾಗಿ ಭಾವಿಸಿ ಕಥೆ ರಚಿಸಿರುವುದಾಗಿ ದೇವರಾಜ್ ಹೇಳಿದರು.

ಮುಧೋಳ ಸಂಸ್ಥಾನದ ಅರಮನೆಯ ದೃಶ್ಯಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗುವುದು. ಅರಮನೆ ತುಂಬ ಸುಂದರವಾಗಿದೆ. ಘೋರ್ಪಡೆ ಅರಸರ ಕುರಿತು ಚಲನಚಿತ್ರ ರಚಿಸಲು ಪ್ರಯತ್ನಿಸುವುದಾಗಿ ಅವರು ಹೇಳಿದರು.

ಚಲನಚಿತ್ರಕ್ಕೆ ‘ಮಹಾಕವಿ ರನ್ನ’ ಎಂದು ಹೆಸರಿಡಲಾಗಿದೆ. ಕವಿಯ ಹಳೆಗನ್ನಡ ಕಾವ್ಯವನ್ನುಯಥಾವತ್ತಾಗಿ ಹೆಚ್ಚಾಗಿ ಬಳಸಿಕೊಳ್ಳಲಾಗಿದೆ. ಇದೊಂದು ವಿಶಿಷ್ಟ ಪ್ರಯೋಗವಾಗಿದೆ ಎಂದು ದೇವರಾಜ್ ಹೇಳಿದರು.

ಮುರುಗೇಶ ನಿರಾಣಿ ಕುರಿತು ಚಿತ್ರ : ನಿರಾಣಿ ಉದ್ಯಮ ಸಮೂಹದ ಸಂಸ್ಥಾಪಕ ಅಧ್ಯಕ್ಷ ಹಾಗೂ ಬೀಳಗಿಯ ಶಾಸಕ ಮುರುಗೇಶ ನಿರಾಣಿ ಅವರ ಸಾಧನೆ ತುಂಬ ದೊಡ್ಡದಿದೆ. ಮುಚ್ಚಿದ ಆರು ಕಾರ್ಖಾನೆಗಳನ್ನು ಪುನಃ ಆರಂಭಿಸಿರುವುದು ಒಂದು ದೊಡ್ಡ ಸಾಹಸದ ಕಥೆಯಾಗಿದೆ. ಅವರ ವ್ಯಕ್ತಿತ್ವ ಕುರಿತು ಚಲನಚಿತ್ರ ನಿರ್ಮಿಸುವುದಾಗಿ ದೇವರಾಜ್ ಹೇಳಿದರು.

ಮುಧೋಳ ಸಂಸ್ಥಾನದ ಪ್ರತಿನಿಧಿ ಅರ್ಜುನಸಿಂಗ್ ಜಡೇಜಾ, ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ ಹಾಗೂ ಸಾಹಿತಿ ಬಿ.ಪಿ.ಹಿರೇಸೋಮಣ್ಣವರ ಉಪಸ್ಥಿತರಿದ್ದರು.

 

Related