ಲವ್ ಜಿಹಾದ್ ನಿಷೇಧದ ಗುರಿ : ಕಟೀಲ್

ಲವ್ ಜಿಹಾದ್ ನಿಷೇಧದ ಗುರಿ : ಕಟೀಲ್

ವಿಜಯಪುರ : ಬಿಜೆಪಿ ಸರ್ಕಾರದಲ್ಲಿ ಕರ್ನಾಟಕ ಮಾದಕ ವ್ಯಸನ ಮುಕ್ತ ರಾಜ್ಯವಾಗುತ್ತಿದ್ದು, ಗೋಹತ್ಯೆ ನಿಷೇಧ ಮಾಡಿದೆ. ಲವ್ ಜಿಹಾದ್ ಸರ್ಕಾರದ ಮುಂದಿರುವ ಗುರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಧಾರವಾಡ, ಬೆಳಗಾವಿ, ಕಲಬುರ್ಗಿ, ಬಳ್ಳಾರಿ ವಿಭಾಗಗಳ 16 ಜಿಲ್ಲೆಗಳ ಪ್ರಕೋಷ್ಠಗಳ ಮುಖ್ಯಸ್ಥರ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗಾಂಧೀಜಿ ಹಾಗೂ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗವನ್ನು ಬಂಡವಾಳ ಮಾಡಿಕೊಂಡು ಕಾಂಗ್ರೆಸ್ ಅಧಿಕಾರದಲ್ಲಿ ಕುಳಿತಿತ್ತು. ದೇಶದಲ್ಲಿ ಬಿಜೆಪಿ ನೇತೃತ್ವದ ವಾಜಪೇಯಿ, ಮೋದಿ ಅವರ ಸರ್ಕಾರಗಳ ಬಳಿಕ ಭಾರತದಲ್ಲಿ ಪರಿವರ್ತನೆ ಆರಂಭಗೊಂಡಿದ್ದು, ಕಾಂಗ್ರೆಸ್ ಶಾಸ್ವತವಾಗಿ ವಿಪಕ್ಷದಲ್ಲಿ ಕುಳಿತುಕೊಳ್ಳುವ ಭೀತಿ ಎದುರಿಸುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ಈ ನಿಟ್ಟಿನಲ್ಲಿ ಬಿಜೆಪಿ ಹಾಗೂ ನಮ್ಮ ಪಕ್ಷದ ಸರ್ಕಾರಗಳು ಕಾರ್ಯೋನ್ಮುಖ ಆಗಿವೆ. ಹೀಗಾಗಿ ಯಾವುದೇ ಚುನಾವಣೆಯಲ್ಲಿ ಕರೆಂಟ್ ಕಂಬ ನಿಲ್ಲಿಸಿದರೂ ಗೆಲ್ಲುತ್ತೆ ಎಂಬ ಭ್ರಮೆ ಸೃಷ್ಟಿಸಿದ್ದ ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರಿಗೆ ನಡುಕ ಹುಟ್ಟಿದೆ ಎಂದು ಕುಟುಕಿದರು.

ಕಾಂಗ್ರೆಸ್ ಬಡವರ ಹೆಸರಲ್ಲಿ ಅಧಿಕಾರದ ರಾಜಕಾರಣ ಮಾಡುತ್ತ ಬಂದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಡ ರೈತರ ಖಾತೆಗೆ 6 ಸಾವಿರ ರೂ. ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ 4 ಸಾವಿರ ರೂ. ಹಣವನ್ನು ಬಡ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಿ ಕೃಷಿಕರಿಗೆ ಸ್ವಾಭಿಮಾನದ ಬದುಕು ಕಟ್ಡಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

Related