ಲೋಕಸಭಾ ಚುನಾವಣೆ ಬಂತೆಂದರೆ ಸಾಕು, ಒಂದಿಲ್ಲೊಂದು ದುರ್ಘಟನೆಗಳು ನಡೆಯುತ್ತವೆ: ಹೆಚ್​​. ಸಿ.ಮಹದೇವಪ್ಪ

ಲೋಕಸಭಾ ಚುನಾವಣೆ ಬಂತೆಂದರೆ ಸಾಕು, ಒಂದಿಲ್ಲೊಂದು ದುರ್ಘಟನೆಗಳು ನಡೆಯುತ್ತವೆ: ಹೆಚ್​​. ಸಿ.ಮಹದೇವಪ್ಪ

ಮೈಸೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಒಂದಲ್ಲ ಒಂದು  ರೀತಿಯ ತೊಂದರೆಗಳು ನಡೆಯುತ್ತಲೇ ಇರುತ್ತವೆ. ಇಂತಹ ತೊಂದರೆಗಳು ಹೊಸದೇನ.ಲ್ಲ ಕಳೆದ ಬಾರಿಯು ಭದ್ರತಾ ಲೋಪದಿಂದ ಲೋಕಸಭಾ ಚುನಾವಣೆಯಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದ್ದು ನಮಗೆ ಗೊತ್ತಿರು ಸಂಗತಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್​​. ಸಿ.ಮಹದೇವಪ್ಪ ಅವರು ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಅವಧಿ ಹತ್ತಿರ ಬಂತೆಂದರೆ ಸಾಕು. ಒಂದಿಲ್ಲೊಂದು ರೀತಿಯ ಭದ್ರತಾ ವೈಫಲ್ಯಗಳು ಉಂಟಾಗಿರುವುದನ್ನು ಇತಿಹಾಸ ನಮಗೆ ತಿಳಿಸಿಕೊಡುತ್ತದೆ. 2001 ರಲ್ಲಿ ಎಲ್ ಕೆ ಅಡ್ವಾಣಿ ಅವರು ಗೃಹ ಸಚಿವರಾಗಿದ್ದಾಗ ಸಂಸತ್ ಮೇಲೆ ದಾಳಿ ನಡೆದಿತ್ತು. ಕಳೆದ ಬಾರಿಯ ಚುನಾವಣೆ ಸಂದರ್ಭದಲ್ಲಿ ಭದ್ರತಾ ವೈಫಲ್ಯದ ಪರಿಣಾಮವಾಗಿ, ಪುಲ್ವಾಮ ಗಡಿಯೊಳಗೆ ಬರೋಬ್ಬರಿ 300 ಕೆಜಿಯಷ್ಟು RDX ಪ್ರವೇಶ ಪಡೆದು ಆದ ಸ್ಪೋಟದಿಂದ, ನಮ್ಮ ಸೈನಿಕರ ಅಮೂಲ್ಯ ಜೀವಗಳು ಹೋಗುವಂತಾಯಿತು. ಅಚ್ಚರಿ ಎಂದರೆ ಇಲ್ಲಿಯವರೆಗೂ ಕೂಡಾ ಪುಲ್ವಾಮ ಗಡಿಯಲ್ಲಿ RDX ಹೇಗೆ ಬಂತು ಎಂಬುದರ ಬಗ್ಗೆ ಯಾವ ತನಿಖೆಯೂ ಆಗದೇ ಇರುವುದು ಎಂದು ಬೇಸರ ವ್ಯಕ್ತಪಡಿಸಿದರು.

ಇದೀಗ ಮತ್ತೆ ಲೋಕಸಭೆಯೊಳಗೆ ಭದ್ರತಾ ವೈಫಲ್ಯದಿಂದಾಗಿ ಆತಂಕ ಸೃಷ್ಟಿ ಆಗಿದೆ. ನಮ್ಮ ಮೈಸೂರಿನ ಸಂಸದರೇ ಆಗಂತುಕ ಆರೋಪಿಗೆ ಪಾಸ್ ನೀಡಿರುವುದು ಸ್ಪಷ್ಟವಾಗಿದೆ. ಒಂದು ವೇಳೆ ಅಲ್ಲಿ ಏನಾದರೂ ದೊಡ್ಡ ಅನಾಹುತ ಘಟಿಸಿದ್ದರೆ ಅದಕ್ಕೆ ಯಾರು ಜವಾಬ್ದಾರಿ? ಭದ್ರತಾ ದೃಷ್ಟಿಯಿಂದ ಸಂಸದ ಪ್ರತಾಪ್ ಸಿಂಹ ಅವರನ್ನು ತನಿಖೆಗೆ ಒಳಪಡಿಸಬೇಕು. ಇದರ ಹಿಂದಿನ ನೈಜ ಕಾರಣಗಳನ್ನು ಪತ್ತೆ ಹಚ್ಚಬೇಕೆಂದು ಈ ಮೂಲಕ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಮಹದೇವಪ್ಪ ಹೇಳಿದ್ದಾರೆ.

 

Related