ಎಎಪಿ ಕಚೇರಿ ಕಟ್ಟಡದ ಮಾಲೀಕರಿಗೆ ಲಿಂಬಾವಳಿ ಬೆದರಿಕೆ

ಎಎಪಿ ಕಚೇರಿ ಕಟ್ಟಡದ ಮಾಲೀಕರಿಗೆ ಲಿಂಬಾವಳಿ ಬೆದರಿಕೆ

ಬೆಂಗಳೂರು : ಆಮ್ ಆದ್ಮಿ ಪಾರ್ಟಿಯು ಭ್ರಷ್ಟ ರಾಜಕಾರಣಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದು, ನಮಗೆ ಕಚೇರಿ ತೆರೆಯಲು ಅವಕಾಶ ನೀಡಿದ ಕಟ್ಟಡದ ಮಾಲಿಕರಿಗೆ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಬೆದರಿಕೆ ಹಾಕಿರುವುದೇ ಇದಕ್ಕೆ ಸಾಕ್ಷಿ ಎಂದು ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.

ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಹನ್ ದಾಸರಿ, ಮಹದೇವಪುರ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷ ಅಶೋಕ್ ಮೃತ್ಯುಂಜಯರವರು ಕಸವನಹಳ್ಳಿ ವೃತ್ತದಲ್ಲಿ ಕಟ್ಟಡವೊಂದನ್ನು ಲೀಸ್‌ಗೆ ಪಡೆದು, ಅಲ್ಲಿ ಬೆಳ್ಳಂದೂರು ವಾರ್ಡ್ ಕಚೇರಿ ಭಾನುವಾರ ಆರಂಭಿಸಿದರು.

ವಿಷಯ ತಿಳಿದ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿಯವರು ಕಚೇರಿಗೆ ಕಟ್ಟಡವನ್ನು ಬಾಡಿಗೆ ನೀಡಿದ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ. ಕಚೇರಿಯನ್ನು ಖಾಲಿ ಮಾಡಿಸದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶಾಸಕರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನಮಗೆ ಕಿರುಕುಳ ನೀಡುತ್ತಿದ್ದಾರೆ. ಲಿಂಬಾವಳಿಯವರ ಪ್ರಜಾಪ್ರಭುತ್ವ ವಿರೋಧಿ ನಡೆಗೆ ಪ್ರಜಾಪ್ರಭುತ್ವದ ಮಾರ್ಗದಲ್ಲಿಯೇ ತಕ್ಕ ಪಾಠ ಕಲಿಸುವುದು ನಮಗೆ ತಿಳಿದಿದೆ ಎಂದು ಮೋಹನ್ ದಾಸರಿ ಹೇಳಿದರು.

ಈ ವೇಳೆ ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂರವರು ಮಾತನಾಡಿ, ಕ್ಷೇತ್ರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕೆರೆ ಒತ್ತುವರಿ ವಿರುದ್ಧ ಎಎಪಿ ಧ್ವನಿ ಎತ್ತಿತ್ತು. ಇದರಿಂದ ಕಂಗೆಟ್ಟಿರುವ ಶಾಸಕ ಲಿಂಬಾವಳಿಯವರು ತಮ್ಮ ಇನ್ನಷ್ಟು ಅಕ್ರಮ ಬಯಲಾಗಬಹುದು ಎಂಬ ಭಯದಿಂದ ಬೆದರಿಕೆ ಹಾಕಿದ್ದಾರೆ. ಕಚೇರಿ ಆರಂಭಿಸುವುದು ಪ್ರಜಾಪ್ರಭುತ್ವ ನಮಗೆ ನೀಡಿರುವ ಹಕ್ಕಾಗಿದ್ದು, ಈ ಹಕ್ಕನ್ನು ಕಿತ್ತುಕೊಳ್ಳುವ ದುಸ್ಸಾಹಸದಿಂದ ಲಿಂಬಾವಳಿಯವರು ಹಿಂದೆ ಸರಿಯಬೇಕು ಎಂದು ಕಿಡಿಕಾರಿದರು.

ಶಾಸಕ ಅರವಿಂದ ಲಿಂಬಾವಳಿಯವರು ತಮ್ಮ ಕ್ಷೇತ್ರವನ್ನು ರಿಪಬ್ಲಿಕ್ ಆಫ್ ಮಹದೇವಪುರ ಮಾಡಲು ಹೊರಟಿದ್ದಾರೆ. ಎಎಪಿಯ ಕಚೇರಿಯ ಆರಂಭಕ್ಕೆ ಅಡ್ಡಗಾಲು ಹಾಕುವ ಬದಲು, ತಾಕತ್ತಿದ್ದರೆ ಮುಂಬರುವ ಚುನಾವಣೆಗಳಲ್ಲಿ ನಮ್ಮನ್ನು ಎದುರಿಸಲಿ ಎಂದು ಜಗದೀಶ್ ವಿ. ಸದಂ ಸವಾಲು ಹಾಕಿದರು. ಎಂದು ಜಗದೀಶ್ ವಿ. ಸದಂ ಸವಾಲು ಹಾಕಿದರು.

Related