ಗೃಹ ಇಲಾಖೆಯಲ್ಲೇ ದಲಿತರಿಗೆ ಅನ್ಯಾಯ!?

ಗೃಹ ಇಲಾಖೆಯಲ್ಲೇ ದಲಿತರಿಗೆ ಅನ್ಯಾಯ!?

ಬೆಂಗಳೂರು: ನೊಂದವರಿಗೆ, ಅರ್ಹರಿಗೆ ನ್ಯಾಯ ಕೊಡಿಸಬೇಕಾದ ಗೃಹ ಇಲಾಖೆಯಲ್ಲೇ ದಲಿತರಿಗೆ ಅನ್ಯಾಯವಾಗಿದೆ. ಕಳೆದ ನಾಲ್ಕು ವರ್ಷದಿಂದಲೂ ಅನ್ಯಾಯವಾಗುತ್ತಿದ್ದರೂ ಅದನ್ನು ಕೇಳುವವರೇ ಇಲ್ಲದಾಗಿರುವುದು ಇನ್ನೂ ವಿಪರ್ಯಾಸವೇ ಸರಿ.

ಎಲ್ಲಿ ಯಾರಿಗೇ ಅನ್ಯಾಯವಾದರೂ ಕೊನೆಗೆ ನ್ಯಾಯಕ್ಕಾಗಿ ಮೊರೆ ಇಡುವುದು ನ್ಯಾಯಾಂಗ ವ್ಯವಸ್ಥೆಯಲ್ಲಿನ ಅವಿಭಾಜ್ಯ ಅಂಗವಾದ ಗೃಹ ಇಲಾಖೆಗೆ. ಆದರೆ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಖಾಲಿ ಇರುವ ನಿರ್ದೇಶಕ ಹುದ್ದೆಯಲ್ಲಿ ಅರ್ಹರಿದ್ದರೂ ನಿಯಮಗಳನ್ನೇ ಗಾಳಿಗೆ ತೂರಿ ಅರ್ಹ ದಲಿತ ಅಧಿಕಾರಿಗಳಿಗೆ ಅನ್ಯಾಯ ಮಾಡಲಾಗಿದೆ. ಸುಮಾರು ಮೂವರು ಅರ್ಹ ಅಧಿಕಾರಿಗಳಿದ್ದರೂ ಅವರಿಗೆ ನಿರ್ದೇಶಕ ಹುದ್ದೆಯನ್ನು ನೀಡದೆ ಸಚಿವಾಲಯದ ಕಾನೂನು ಇಲಾಖೆಯ ವಿಶೇಷ ಕಾರ್ಯದರ್ಶಿ ಎಚ್.ಕೆ. ಜಗದೀಶ್ ಅವರನ್ನು ನಿಯಮಗಳನ್ನು ಗಾಳಿಗೆ ತೂರಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕ ಹುದ್ದೆಗೆ ಕೂರಿಸಬೇಕಾಗಿದೆ.

ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ವೃಂದ ಮತ್ತು ನೇಮಕಾತಿಯ ನಿಯಮಗಳು ದಿನಾಂಕ 30-01-2012 ರ ಪ್ರಕಾರ ಅಭಿಯೋಗ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡಲು ಪ್ರಾಸಿಕ್ಯೂಷನ್ ನಲ್ಲಿ ಕನಿಷ್ಠ ಎರಡು ವರ್ಷ ಕೇಡರ್ ಆಫ್ ಡೆಪ್ಯೂಟಿ ಡೈರೆಕ್ಟರ್ ಆಗಿ ಕೆಲಸ ಮಾಡಿದ ಅನುಭವ ಇರಬೇಕು. ಕಲಂ 25 ( ಎ ) ಪ್ರಕಾರ ಇಲಾಖೆಯಲ್ಲೇ ಇರುವ ಅರ್ಹರಿಗೆ ನಿರ್ದೇಶಕ ಹುದ್ದೆಯನ್ನು ಬಡ್ತಿ ನೀಡಬೇಕಾಗುತ್ತದೆ. ಉಪನಿರ್ದೇಶಕರಾಗಿ ಎರಡು ವರ್ಷದ ಅನುಭವ ಇಲ್ಲದಿದ್ದರೂ ಕನಿಷ್ಠ ಒಂದು ವರ್ಷವಾದರೂ ಅನುಭವ ಇರುವ ಇಲಾಖೆಯವರನ್ನೇ ನಿರ್ದೇಶಕ ಹುದ್ದೆಗೆ ಕೂರಿಸಬಹುದು; ಹಾಗೇ ಬೇರೆ ಇಲಾಖೆಯಲ್ಲಿರುವವರನ್ನು ಈ ನಿರ್ದೇಶಕ ಹುದ್ದೆಗೆ ಕೂರಿಸುವಂತಿಲ್ಲ. ಸಿ.ಆರ್.ಪಿ.ಸಿ ಕಲಂ 25 (ಎ) ಕರ್ನಾಟಕ ರಾಜ್ಯ ತಿದ್ದುಪಡಿ ಕಾಯ್ದೆ 39/2012-13 ಪ್ರಕಾರ ಅಭಿಯೋಜನಾ ಇಲಾಖೆ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಇಲಾಖೆಯ ಅಧಿಕಾರಿಗಳನ್ನು ನಿರ್ದೇಶಕ ಹುದ್ದೆಯಲ್ಲಿ ಪ್ರಭಾರದಲ್ಲಿ ಕಾರ್ಯನಿರ್ವಹಿಸಲು ಅವಕಾಶವಿಲ್ಲ. ಆದರೆ ಇಲ್ಲಿ ಆಗಿರುವುದೇ ಬೇರೆ. ಈ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಜಗದೀಶ್ ಅವರನ್ನು ನಿರ್ದೇಶಕ ಹುದ್ದೆಗೆ ಕೂರಿಸಲಾಗಿದೆ. ಈ ಬಗ್ಗೆ ಇಲಾಖೆಯಲ್ಲಿ ವ್ಯಾಪಕವಾಗಿ ದೂರುಗಳು ಕೇಳಿಬಂದಿವೆ. ಈ ಹಿಂದಿನ ಸರ್ಕಾರದಲ್ಲಿ ಈ ಬಗ್ಗೆ ಸ್ವತಃ ಅಂದಿನ ಕಾನೂನು ಇಲಾಖೆ ಹಾಗೂ ಒಳಾಡಳಿತ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳಿಗೂ ದೂರು ನೀಡಲಾಗಿದೆ. ಆದರೆ ಯಾರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ!

ನಿರ್ದೇಶಕ ಹುದ್ದೆಯಲ್ಲಿ ಇರುವ ಎಚ್.ಕೆ. ಜಗದೀಶ್ ಅವರು ಹೆಚ್ಚುವರಿ ಪ್ರಭಾರಿಯಾಗಿ ಹೊರಡಿಸಿದ ಆದೇಶಗಳನ್ನು ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಶ್ನಿಸಿದರೆ ಕಾನೂನು / ನಿಯಮಗಳ ತೊಡಕಾಗುತ್ತದೆ. ಜೊತೆಗೆ ಅಭಿಯೋಜನಾ ಇಲಾಖೆಯ ನಿರ್ದೇಶಕರ ಕಚೇರಿಯಲ್ಲಿರಬೇಕಾದ ಜಗದೀಶ್ ಅವರು ತಮ್ಮ ವಿಧಾನ ಸೌಧದ ಕಚೇರಿಯಿಂದಲೇ ನಿಭಾಯಿಸುವ ಕಾರಣಕ್ಕೆ ಪ್ರತಿಯೊಂದ ಸಮಸ್ಯೆಯ ಪರಿಹಾರಕ್ಕೂ ಅಧಿಕಾರಿಗಳು ವಿಧಾನಸೌಧವನ್ನು ಎಡತಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಭಿಯೋಜನಾ ಇಲಾಖೆಯಲ್ಲಿ ಅಭಿಯೋಗ ಉಪನಿರ್ದೇಶಕರಾಗಿ ಒಂದು ವರ್ಷ ಸೇವೆ ಸಲ್ಲಿಸಿ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಲು ಫೆಬ್ರವರಿ 2022 ರಿಂದಲೂ ಮೂವರು ಅಧಿಕಾರಿಗಳು ಅರ್ಹತೆ ಪಡೆದು ಕಾಯುತ್ತಿದ್ದಾರೆ. ಇಷ್ಟಾದರೂ ಆ ಯಾವೊಬ್ಬ ಅಧಿಕಾರಿಗಳಿಗೂ ಬಡ್ತಿ ನೀಡಿಲ್ಲ.ಅವರು ದಲಿತ ಸಮುದಾಯದವರು ಎಂಬ ಒಂದೇ ಕಾರಣಕ್ಕೆ ಈ ಬಡ್ತಿ ನೀಡಲಾಗಿಲ್ಲ ಎಂಬ ಮಾತುಗಳು ಇಡೀ‌ ಇಲಾಖೆಯಲ್ಲಿ ಕೇಳಿಬರುತ್ತಿದೆ‌. ರಾಜ್ಯದ ಮೂಲೆ ಮೂಲೆಯಲ್ಲಿ ನಡೆಯುವ ದಲಿತ ವಿರೋಧಿ ಕೃತ್ಯಗಳ ಬಗ್ಗೆ ಮಾತನಾಡುವ ಶಕ್ತಿ ಸೌಧದ ಬುಡದಲ್ಲೇ ಇಂತಹದ್ದೊಂದು ದಲಿತ ವಿರೋಧಿ ಕೃತ್ಯ ನಡೆದಿರುವುದು ವಿಪರ್ಯಾಸ.

Related