ಪುರಸಭೆ ಅಧಿಕಾರಿಗಳ ನಿರ್ಲಕ್ಷ, ಅಧಿಕಾರಿಗಳಿಗೆ ಹಿಡಿಶಾಪ

ಪುರಸಭೆ ಅಧಿಕಾರಿಗಳ ನಿರ್ಲಕ್ಷ, ಅಧಿಕಾರಿಗಳಿಗೆ ಹಿಡಿಶಾಪ

ಜೇವರ್ಗಿ : ತಾಲೂಕಿನಾದ್ಯಂತ ಭಾನುವಾರದಿಂದ ಸುರಿಯುತ್ತಿರುವ ಸುರಿದ ಧಾರಾಕಾರ ಮಳೆಗೆ ತಾಲೂಕಿನ ರೈತಾಪಿ ವರ್ಗದವರ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡುವ ಮಿನಿ ವಿಧಾನಸೌಧ, ತಹಶೀಲ್ದಾರ್ ಕಛೇರಿ ನೀರಿನಲ್ಲಿ ತೇಲುತ್ತಿರುವಂತೆ ಕಾಣುತ್ತದೆ. ಪಟ್ಟಣದ ಅನೇಕ ಚರಂಡಿಗಳು ತುಂಬಿ ರಸ್ತೆಯ ಮೇಲೆ ಹಳ್ಳದಂತೆ ಹರಿಯುತ್ತಿರುವುದರಿಂದ ಸಾರ್ವಜನಿಕರ ಜನಜೀವನ ಅಸ್ತವ್ಯಸ್ತವಾಗಿದೆ.

ಪಟ್ಟಣದಲ್ಲಿ ಸ್ವಲ್ಪ ಮಳೆಯಾದರೂ ಸಾಕು  ಚರಂಡಿಗಳು ತುಂಬಿ ರಸ್ತೆಯ ಮೇಲೆ  ಚರಂಡಿ ನೀರು ಹಳ್ಳಗಳಂತೆ ಹರಿವ ದೃಶ್ಯ ಸಾಮಾನ್ಯವಾಗಿದೆ, ಸೋಮವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದ ಪಟ್ಟಣದಲ್ಲಿರುವ ಮಿನಿ ವಿಧಾನಸೌಧದ ತುಂಬೆಲ್ಲ ನೀರು ತುಂಬಿಕೊಂಡು ವಿಧಾನಸೌಧ ಕಟ್ಟಡ ನೀರಿನಲ್ಲಿ ತೇಲಾಡುವಂತೆ ಕಾಣುತ್ತಿದೆ.

ಪಟ್ಟಣದ ಅನೇಕ ಬಡಾವಣೆಗಳ ನಿವಾಸಿಗಳು ಪುರಸಭೆ ಯವರಿಗೆ ದೂರು ನೀಡಿದರೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಜೇವರ್ಗಿ ರಸ್ತೆಯ ಮೇಲೆ ಹಳ್ಳದಂತೆ ಹರಿಯುತ್ತಿರುವ ಕಾರಣ ಚಿಕ್ಕ ಮಕ್ಕಳು ವೃದ್ಧರು ಸಂಚರಿಸಲು ಜೀವ ಕೈಯಲ್ಲಿ ಹಿಡಿದುಕೊಂಡು ಇರುವಂತ ಪರಿಸ್ಥಿತಿ ಬಂದೊದಗಿದೆ. ಇದೆಲ್ಲದಕ್ಕಿಂತ ದುಃಸ್ಥಿತಿ ಎಂದರೆ ಜನತಾ ಕಾಲೋನಿ, ಅಂಬೇಡ್ಕರ್ ನಗರ,ಗಾಂಧಿನಗರ ಖಾಜಾ ಕಾಲೋನಿ ಸೇರಿದಂತೆ ಅನೇಕ ಬಡಾವಣೆಯ ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ಉದ್ಭವವಾಗಿದೆ. ಅಷ್ಟೇ ಅಲ್ಲದೆ ಅಂಗಡಿ ಮುಂಗಟ್ಟುಗಳಿಗೆ ನೀರು ತುಂಬಿ ವ್ಯಾಪಾರಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Related