ಸಂವಿಧಾನವನ್ನು ಬದಲಿಸಿದರೆ ರಕ್ತಪಾತವಾಗಲಿದೆ: ಸಿಎಂ

ಸಂವಿಧಾನವನ್ನು ಬದಲಿಸಿದರೆ ರಕ್ತಪಾತವಾಗಲಿದೆ: ಸಿಎಂ

 ಬೆಂಗಳೂರು:  ಬಿಜೆಪಿಗೆ 400ಕ್ಕಿಂತಲೂ ಅಧಿಕ ಸೀಟು ಸಿಕ್ಕಿದರೆ ಸಂವಿಧಾನ ಬದಲಾವಣೆ ಮಾಡಲು ಅನುಕೂಲವಾಗುತ್ತದೆ ಎಂಬ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆಯವರ ವಿವಾದಾತ್ಮಕ ಹೇಳಿಕೆಗೆ ತೀವ್ರ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಒಂದು ವೇಳೆ ಸಂವಿಧಾನವನ್ನು ಬದಲಿಸಿದರೆ ರಕ್ತಪಾತವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಆಹಾರ ಸೌಧ ಕಟ್ಟಡದ ಶಂಕುಸ್ಥಾಪನೆ ಹಾಗೂ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿಸಲು ಆಗಮಿಸಿದ ವೇಳೆ ಮಾತನಾಡಿದ ಅವರು. ಒಂದು ವೇಳೆ ಸಂವಿಧಾನ ಬದಲಾವಣೆ ಮಾಡಿದರೆ ದೇಶದಲ್ಲಿ ರಕ್ತಪಾಕ್ತವಾಗಲಿದೆ. ಇದು ಬಿಜೆಪಿಗೆ ತಿಳಿದಿರಲಿ ಎಂದರು.
ಅನಂತಕುಮಾ‌ರ್ ಹೆಗಡೆ ಅವರು ಸಂವಿಧಾನ ಬದಲಾವಣೆಯ ಬಗ್ಗೆ ಪದೇಪದೆ ಮಾತನಾಡುತ್ತಿದ್ದಾರೆ. ಅವರು ಈ ರೀತಿ ಮಾತನಾಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಹಿಂದೊಮ್ಮೆ ಕೇಂದ್ರದಲ್ಲಿ ಸಚಿವರಾಗಿದ್ದಾಗಲೇ ಹೇಳಿದ್ದರು. ಅವರು ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಮಂತ್ರಿಯಾಗಿದ್ದಾಗಲೇ ಇಂಥ ಹೇಳಿಕೆಯನ್ನು ನೀಡಿದ್ದರೂ ನರೇಂದ್ರ ಮೋದಿಯವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ನೆನಪಿಸಿದರು.
ಸಂವಿಧಾನ ಬದಲಾವಣೆ ಎನ್ನುವುದು ಬಿಜೆಪಿಯ ಹಿಡನ್ ಅಜೆಂಡಾ. ಅದಕ್ಕೆ ಬೇರೆ ಬೇರೆಯವರ ಮೂಲಕ ಹೇಳಿಸುತ್ತಿದ್ದಾರೆ. ಸಂವಿಧಾನಕ್ಕೆ ಅನಗತ್ಯ ವಿಚಾರಗಳನ್ನ ಸೇರಿಸಿದ್ದಾರೆ. ಹಾಗಾಗಿ ಬದಲಾಯಿಸಬೇಕು ಎನ್ನುವುದು ಅವರ ನಿಲುವು ಸಂವಿಧಾನ ಬದಲಾವಣೆ ಮಾಡಬೇಕು ಮೂರನೇ ಎರಡು ಬಹುಮತ ಬೇಕು. ಈಗ 400 ಸೀಟುಗಳು ಬಂದರೆ ಸಂವಿಧಾನ ಬದಲಾವಣೆಗೆ
ಅವಕಾಶವಾಗುತ್ತದೆ ಎನ್ನುವುದು ಅವರ ಆಸೆ. ಅವರು 400 ಸೀಟು ಕೇಳುತ್ತಿರುವುದು ದೇಶ ಉದ್ಧಾರಕ್ಕೆ ಅಲ್ಲ, ಬಡವರ ಉದ್ಧಾರಕ್ಕೆ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಅವರ ಹೇಳಿಕೆ ವೈಯಕ್ತಿಕ ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಬಿಜೆಪಿಯ ಹಿರಿಯ ನಾಯಕರು ಅನಂತ್ ಕುಮಾರ್ ಹೆಗಡೆ ಮೂಲಕ ಹೇಳಿಸುತ್ತಿದ್ದಾರೆ. ಮಂತ್ರಿ ಮಂಡಲದಲ್ಲಿದ್ದಾಗಲೇ ಅವರು ಮಾತನಾಡಿದ್ದು ಅವರ ವಯಕ್ತಿಕ ಹೇಳಿಕೆ ಆಗುತ್ತದಾ? ಸರ್ಕಾರ ಅಂದ್ರೆ ಅದು ಪಕ್ಷದ ಹೇಳಿಕೆ. ಅವರು ಈಗ ಹಾಲಿ ಸಂಸದರು. ಅವರು ಸ್ಟೇಟೆಂಟ್ ಕೊಡ್ತಾರೆ ಅಂದ್ರೆ ಏನರ್ಥ? ಅವರು ಸೀನಿಯರ್ ಸಂಸದರು. ನಮ್ಮೂ ಅದಕ್ಕೂ ಸಂಬಂಧವಿಲ್ಲ ಅಂದ್ರೆ ಹೇಗೆ..? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

 

Related