ಹೈಕಮಾಂಡ್ ಗೆ ಇಂಚಿಂಚಾಗಿ ಎಲ್ಲವನ್ನು ಹೇಳಿದ್ದೇನೆ; ರಾಮಲಿಂಗಾರೆಡ್ಡಿ ನಿರ್ಧಾರ ಸ್ವಾಗತಾರ್ಹ: ಯತ್ನಾಳ

ಹೈಕಮಾಂಡ್ ಗೆ ಇಂಚಿಂಚಾಗಿ ಎಲ್ಲವನ್ನು ಹೇಳಿದ್ದೇನೆ; ರಾಮಲಿಂಗಾರೆಡ್ಡಿ ನಿರ್ಧಾರ ಸ್ವಾಗತಾರ್ಹ: ಯತ್ನಾಳ

ವಿಜಯಪುರ: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಕುರಿತು ಈಗಾಗಲೇ ನಾನು ಹೈಕಮಾಂಡ್ಗೆ ಎಲ್ಲ ವಿಷಯವನ್ನು ತಿಳಿಸಿದ್ದೇನೆ. ನನ್ನನ್ನು ರಾಜಕೀಯಕ್ಕೆ ಬಿಜೆಪಿ ನಾಯಕ ಯಡಿಯೂರಪ್ಪ ಕರೆ ತಂದಿಲ್ಲ. ಸಚಿವ ರಾಮಲಿಂಗಾರೆಡ್ಡಿ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಬಾರಿ ಕೊರೊನಾ ಸಂದರ್ಭದಲ್ಲಿ ಬಿಜೆಪಿ ನಾಯಕ ಎಡಿಯೂರಪ್ಪ ಮತ್ತು ಅವರ ಮಗ ಬಿಜೆಪಿ ರಾಜ್ಯಾಧ್ಯಕ್ಷ ಯಾವೆಲ್ಲ ಅವ್ಯವಹಾರಗಳನ್ನು ಮಾಡಿದ್ದಾರೆ ಎಂದು ನಾನು ಇಂಚಿಂಚಾಗಿ ಹೈಕಮಾಂಡ್ ಮುಂದೆ ಇಟ್ಟಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇನ್ನು ಕೇಂದ್ರ ಹೈಕಮಾಂಡ್ ನಿಂದ ನನಗೆ ಕರೆ ಬಂದ ಕಾರಣ ನಾನು ಕೇಂದ್ರದ ಹಿರಿಯ ನಾಯಕರುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದರು. ರಾಷ್ಟ್ರೀಯ ಅಧ್ಯಕ್ಷರ ಭೇಟಿಗೂ ಮುನ್ನ ಪ್ರಧಾನಾ ಕಾರ್ಯದರ್ಶಿಗಳಾದ ಅರುಣಸಿಂಗ್ ಮತ್ತು ರಾಧಾ‌ಮೋಹನ ಅಗರವಾಲ ಅವರನ್ನು ಭೇಟಿ ಮಾಡಲು ಹೇಳಿದ್ದರು.

ಅವರಿಬ್ಬರ ಬಳಿ ಮಾತನಾಡಿದ ಮಾಹಿತಿಯನ್ನು ತಿಳಿದುಕೊಂಡ ಬಳಿಕ ಅಮಿತ್ ಶಾ ಮತ್ತು ನಡ್ಡಾ ಅವರನ್ನು ಭೇಟಿ ಮಾಡಿದೆ.  ಅಮಿತ ಶಾ ಅವರ ನಿವಾಸದಲ್ಲಿ ಜೆ. ಪಿ. ನಡ್ಡಾ ಸಮ್ಮುಖದಲ್ಲಿ 25 ನಿಮಿಷಗಳ ಕಾಲ ಸುದೀರ್ಘ ಮಾತುಕತೆ ನಡೆಯಿತು.  ಎಲ್ಲಾ ವಿಚಾರಗಳನ್ನ ಕೇಂದ್ರದ ನಾಯಕರ ಮುಂದೆ ಹೇಳಿದ್ದೇನೆ.  ಎಲ್ಲವನ್ನೂ ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಕೇಂದ್ರದ ನಾಯಕರು ಭರವಸೆ ನೀಡಿದ್ದಾರೆ.

 

Related