ಹೆಚ್.ಎಸ್.ಆರ್. ನಲ್ಲಿ ಮಳೆ ಅವಾಂತರ, ಅಧಿಕಾರಿಗಳು ದೌಡು

ಹೆಚ್.ಎಸ್.ಆರ್. ನಲ್ಲಿ ಮಳೆ ಅವಾಂತರ, ಅಧಿಕಾರಿಗಳು ದೌಡು

ಬೆಂಗಳೂರು : ರಾತ್ರೋ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಹೆಚ್‍ಎಸ್‍ಆರ್ ವಿಭಾಗ ಸೆಕ್ಟರ್ 3,6,7ರಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಯಿತು.

ಬೇಗೂರು ಕೆರೆಯಿಂದ ಬೆಳ್ಳಂದೂರು ಕೆರೆಗೆ ಹೋಗುವ ಸ್ಟಾರ್ ಮೋಟಾರ್ ಡ್ರೈನೇಜ್ ರಾಜಕಾಲುವೆಯಿಂದ ನೀರಿನ ಒಳ ಹರಿವು ಹೆಚ್ಚಾಗಿ ಹೆಚ್‍ಎಸ್‍ಆರ್ ಬಡಾವಣೆಯ 6,7 ಸೆಕ್ಟರ್‍ನಲ್ಲಿರುವ ಸಾಕಷ್ಟು ಮನೆಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶಗಳೆಂದೇ ಗುರುತಿಸಲ್ಪಟ್ಟ ಮಂಗಮ್ಮನ ಪಾಳ್ಯ, ಮದೀನಾ ನಗರ, ಹೆಚ್‍ಎಸ್‍ಆರ್ ಬಡಾವಣೆಯ ಮೂರನೇ ಹಂತ, ಹೊಂಗಸಂದ್ರ ಕೋಡಿ ವಿಭಾಗ ಜಲಾವೃತವಾಗಿದೆ.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ರವರು ಕೂಡಲೇ ಜಲಾವೃತಗೊಂಡ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಸಾಂತ್ವನ ಹೇಳಿದರು. ತಕ್ಷಣ ಬಿಡಬ್ಲ್ಯೂಎಸ್‍ಎಸ್‍ಬಿ ಹಾಗೂ ಅಗ್ನಿಶಾಮಕ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪಂಪಿಂಗ್ ಮಾಡಿಸುವ ಮೂಲಕ ಸಾರ್ವಜನಿಕರಿಗೆ ನೆರವಾದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸತೀಶ್ ರೆಡ್ಡಿ ಅನಿರೀಕ್ಷಿತ ಸುರಿದ ಮಳೆಯಿಂದ ರಾಜಕಾಲುವೆಯ ಒಳಹರಿವು ಹೆಚ್ಚಾಗಿ ಹೆಚ್‍ಎಸ್‍ಆರ್ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದೆ. ಬಿಬಿಎಂಪಿ ಸಿಬ್ಬಂದಿಯಿಂದ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ತಕ್ಷಣ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆಂದರು.

ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣ ಹಾಗೂ ಇತರೇ ಸಿಬ್ಬಂದಿಗಳು ಶಾಸಕರೊಂದಿಗೆ ತೆರಳಿ ತಗ್ಗು ಪ್ರದೇಶಗಳನ್ನು ವೀಕ್ಷಿಸಿದರು. ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಆದೇಶಿಸಿದರು. ಅತಿ ಹೆಚ್ಚಿನ ಮಳೆಯಿಂದ ಈ ಅವಾಂತರ ನಡೆದಿದೆ.

ಮುಂಬರುವ ದಿನಗಳಲ್ಲಿ ಸರಾಗವಾಗಿ ನೀರು ಹರಿಯಲು ಸುವ್ಯವಸ್ಥಿತ ಚರಂಡಿ ವ್ಯವಸ್ಥೆ ಹಾಗೂ ರಾಜಕಾಲುವೆಯ ಹೂಳನ್ನು ತೆಗೆಯುವ ಮೂಲಕ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ. ಕೊರೋನಾದಿಂದ ಕಾರ್ಮಿಕರು ಲಭ್ಯವಿಲ್ಲದ ಕಾರಣ ಕಾಮಗಾರಿ ತಡವಾಗುತ್ತಿದೆ. ಆದಷ್ಟು ಬೇಗ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂಬ ಭರವಸೆಯನ್ನು ಜಂಟಿ ಆಯುಕ್ತ ರಾಮಕೃಷ್ಣ ನೀಡಿದರು.

Related