ತೆಲುಗಿನಲ್ಲೂ ಮಿಂಚಲು ತಯಾರಾಗಿದ್ದಾನೆ ಕನ್ನಡದ ‘ಹೀರೋ’!

ತೆಲುಗಿನಲ್ಲೂ ಮಿಂಚಲು ತಯಾರಾಗಿದ್ದಾನೆ ಕನ್ನಡದ ‘ಹೀರೋ’!

ಇತ್ತೀಚೆಗೆ ಕನ್ನಡದ ಚಿತ್ರಗಳು ತೆಲುಗಿನಲ್ಲಿ ಭರ್ಜರಿ ಸದ್ದು ಮಾಡುತ್ತಿವೆ. ತೆಲುಗಿನ ‘ಆಹಾ ಒಟಿಟಿ’ ಮುಖಾಂತರ ಕನ್ನಡದ ಹಲವು ಚಿತ್ರಗಳು ಡಬ್ ಆಗಿ ತೆರೆಗೆ ಬರುತ್ತಿವೆ.

ಈ ಹಿಂದೆ ಜಯತೀರ್ಥ ನಿರ್ದೇಶನದ, ರಿಷಬ್ ಶೆಟ್ಟಿ, ಹರಿಪ್ರಿಯಾ ಅಭಿನಯದ ‘ಬೆಲ್‌ಬಾಟಂ’ ‘ಆಹಾ’ದಲ್ಲಿ ಬಿಡುಗಡೆಯಾಗಿ ತೆಲುಗು ಚಿತ್ರರಸಿಕರ ಮನಸೂರೆಗೊಂಡಿತ್ತು. ಇದರ ಬೆನ್ನಲ್ಲೇ ರಿಷಬ್ ಮತ್ತೊಮ್ಮೆ ತೆಲುಗಿಗೆ ಜಿಗಿಯಲಿದ್ದಾರೆ.  ರಿಷಬ್ ಶೆಟ್ಟಿ, ಗಾನವಿ ಲಕ್ಷ್ಮಣ್ ಮೊದಲಾದವರು ಅಭಿನಯಿಸಿರುವ ಕನ್ನಡದ ‘ಹೀರೋ’ ಚಿತ್ರ ಜುಲೈ 24ರಂದು ‘ಆಹಾ’ ಒಟಿಟಿಯಲ್ಲಿ ತೆರೆಕಾಣಲಿದೆ.

‘ಆಹಾ’ ಯುಟ್ಯೂಬ್ ಚಾನೆಲ್‌ನಲ್ಲಿ ಈಗಾಗಲೇ ಹೀರೋ ಚಿತ್ರದ ತೆಲುಗು ಅವತರಣಿಕೆಯ ಟ್ರೈಲರ್ ಬಿಡುಗಡೆಯಾಗಿದ್ದು ಎಲ್ಲರ ಗಮನ ಸೆಳೆದಿದೆ. ಕನ್ನಡದಲ್ಲಿ ಮೊದಲ ಹಂತದ ಲಾಕ್‌ಡೌನ್ ಮುಗಿದ ನಂತರ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಹೀರೋ ಚಿತ್ರ ಪ್ರೇಮಿಗಳ ಗಮನ ಸೆಳೆದಿತ್ತು. ಕೇವಲ 24 ಜನರ ತಂಡ ಲಾಕ್‌ಡೌನ್‌ನಲ್ಲಿ ಈ ಚಿತ್ರವನ್ನು ಚಿತ್ರೀಕರಿಸಿದ್ದು ವಿಶೇಷ. ಈಗ ‘ಹೀರೋ’ ತೆಲುಗಿಗೆ ಹೊರಡಲು ತಯಾರಾಗಿದ್ದಾನೆ. ಬೆಲ್‌ಬಾಟಂನ ಯಶಸ್ಸು ಹೀರೋಗೆ ಆತ್ಮವಿಶ್ವಾಸ ತಂದುಕೊಟ್ಟಿರುವುದಂತೂ ಹೌದು. ಜೊತೆಗೆ ತೆಲುಗಿನ ಒಟಿಟಿಯಲ್ಲಿ ಕನ್ನಡದ ಚಿತ್ರಗಳು ಡಬ್ ಆಗಿ ತೆರೆ ಕಾಣುವುದು ಚಿತ್ರ ತಯಾರಕರಿಗೆ ಹೊಸ ಮಾರುಕಟ್ಟೆಯನ್ನೂ ಒದಗಿಸಿದಂತಾಗಿದೆ.

ಆಹಾ’ ಒಟಿಟಿ ಹೀರೋ ಚಿತ್ರದ ಟ್ರೈಲರ್ ಅನ್ನು ಹಂಚಿಕೊಂಡು ನೀವೆಲ್ಲಾ ಪ್ರೇಮಕ್ಕಾಗಿ ಎಷ್ಟು ದೂರ ಪ್ರಯಾಣಿಸುತ್ತೀರಿ? ಆದರೆ ಇಲ್ಲೊಬ್ಬ ಪ್ರೇಮಿ ಎಷ್ಟು ದೂರ ಪ್ರಯಾಣಿಸುತ್ತಾನೆ ಎಂದು ತಿಳಿಯಬೇಕಾದರೆ ಚಿತ್ರವನ್ನು ನೋಡಬೇಕು ಎಂದು ಬರೆದುಕೊಂಡಿದೆ. ಜುಲೈ 24ಕ್ಕೆ ಹೀರೋ ತೆಲುಗಿನಲ್ಲಿ ಲಭ್ಯವಿರಲಿದ್ದಾನೆ ಎಂದು ಆಹಾ ತಿಳಿಸಿದೆ.

ಹೀರೋ ಚಿತ್ರವನ್ನು ಎಂ.ಭರತ್ ರಾಜ್ ನಿರ್ದೇಶಿಸಿದ್ದು, ಸ್ವತಃ ರಿಷಬ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಅರವಿಂದ್.ಎಸ್.ಕಶ್ಯಪ್ ಛಾಯಾಗ್ರಹಣವನ್ನು ಮಾಡಿದ್ದು, ಬಿ.ಅಜನೀಶ್ ಲೋಕನಾಥ್ ಸಂಗೀತವನ್ನು ನೀಡಿದ್ದಾರೆ.
ಇತ್ತೀಚೆಗಷ್ಟೇ ಕನ್ನಡದ ಲೂಸಿಯಾ ಪವನ್ ನಿರ್ದೇಶನದಲ್ಲಿ ಅಮಲಾ ಪೌಲ್ ಅಭಿನಯದ ‘ಕುಡಿ ಎಡಮೈತೆ’ ಸೀರೀಸ್ ‘ಆಹಾ’ದಲ್ಲಿ ಬಿಡುಗಡೆಯಾಗಿತ್ತು. ಸೀರೀಸ್‌ಗೆ ಕನ್ನಡ ಸಬ್‌ಟೈಟಲ್‌ನ್ನು ನೀಡಿದ್ದಕ್ಕೆ ಕನ್ನಡದ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದರು.

Related