ಮೂರನೇ ಅಲೆ ಎದುರಿಸಲು ಸಿದ್ಧರಾಗಿ

ಮೂರನೇ ಅಲೆ ಎದುರಿಸಲು ಸಿದ್ಧರಾಗಿ

ನಾಗಮಂಗಲ : ಕೋವಿಡ್ ಮೂರನೇ ಅಲೆ ಆರಂಭವಾಗುತ್ತಿದ್ದು ತಾಲೂಕಿನಲ್ಲಿ ಸೋಂಕು ಬಾರದಂತೆ ತಡೆಗಟ್ಟುವಲ್ಲಿ ಕಾರ್ಯೋನ್ಮುಖರಾಗುವ ಜೊತೆಗೆ ಎಂಥಹ ಪರಿಸ್ಥಿತಿ ಎದುರಾದರೂ ಎದುರಿಸಲು ಸಿದ್ದರಿರಬೇಕು ಎಂದು ಅಧಿಕಾರಿಗಳಿಗೆ ಶಾಸಕ ಸುರೇಶ್‌ಗೌಡ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ ಟಾಸ್ಕ್ಫೋರ್ಸ್ ಸಮಿತಿಯ ಸಭೆ ನಡೆಸಿ ಮಾತನಾಡಿ, ಮೂರನೇ ಅಲೆಯ ಮುನ್ಸೂಚನೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್‌ಗಳನ್ನು ಸಿದ್ಧಪಡಿಸಬೇಕೆಂದರು.

ಖಾಸಗಿಗೆ ಔಷಧಿ ಬರೆದರೆ ಕ್ರಮ
ತಾಲೂಕಿನಲ್ಲಿ ಸಾರ್ವಜನಿಕ ಆಸ್ಪತ್ರೆಗಳ ವೈದ್ಯರು ಖಾಸಗಿ ಮೆಡಿಕಲ್ ಸ್ಟೋರ್‌ಗಳಿಗೆ ಔಷಧಿಯನ್ನು ಬರೆಯುತ್ತಿರುವುದಾಗಿ ನೂರಾರು ದೂರುಗಳು ಕೇಳಿಬರುತ್ತಿವೆ. ಇದು ನಿಲ್ಲದಿದ್ದರೆ ಅಂತಹ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಔಷಧಿಗಳ ಪೂರೈಕೆಯಾಗುತ್ತಿಲ್ಲ
ಸಾರ್ವಜನಿಕ ಆಸ್ಪತ್ರೆಗೆ ಸಮರ್ಪಕವಾಗಿ ಔಷಧಿಗಳು ಪೂರೈಕೆಯಾಗುತ್ತಿಲ್ಲ. ಖಾಸಗಿಯಿಂದ ಖರೀದಿಸಲು ತಿಳಿಸುತ್ತಾರೆ. ಆದರೆ ಖಾಸಗಿಯಲ್ಲಿ ಖರೀದಿಸಿದರೆ ಬೆಲೆ ಹೆಚ್ಚಾಗುತ್ತಿದ್ದು ಇದು ನಮ್ಮ ಆಡಿಟ್‌ಗೆ ತೊಂದರೆಯಾಗುತ್ತಿದೆ. ಎಲ್ಲಾ ಔಷಧಿಗಳನ್ನು ಖಾಸಗಿಯಿಂದ ಖರೀದಿ ಮಾಡುವುದು ಕಷ್ಟಸಾದ್ಯವಾಗುತ್ತಿದೆ.

ಸಾಮಾನ್ಯವಾಗಿ ನೀಡಲಾಗುವಹ ಔಷಧಿಗಳನ್ನು ಸರ್ಕಾರದಿಂದ ಪೂರೈಕೆ ಮಾಡುತ್ತಿಲ್ಲವೆಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವೆಂಕಟೇಶ್ ಶಾಸಕರ ಮುಂದೆ ಅಳಲು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಕುಂಞ ಅಹಮ್ಮದ್, ತಾ.ಪಂ. ಇಓ ಚಂದ್ರಮೌಳಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ, ಸಿಪಿಐ ಸುಧಾಕರ್ ಸೇರಿದಂತೆ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

Related