ವಿಭವ ಇಂಡಸ್ಟ್ರೀಸ್‌ನಲ್ಲಿ ಅಗ್ನಿಅನಾಹುತ 

ವಿಭವ ಇಂಡಸ್ಟ್ರೀಸ್‌ನಲ್ಲಿ ಅಗ್ನಿಅನಾಹುತ 

ಹುಬ್ಬಳ್ಳಿ : ತಾಲೂಕಿನ ಶೆರೇವಾಡ ಕ್ರಾಸ್ ಬಳಿಯ ವಿಭವ ಇಂಡಸ್ಟ್ರೀಸ್‌ನಲ್ಲಿ ಸೋಮವಾರ ಸಂಜೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಕೋಟ್ಯಂತರ ರೂ. ಮೌಲ್ಯದ ಪಿನಾಯಿಲ್ ತಯಾರಿಕೆ ರಾಸಾಯನಿಕ ಹಾಗೂ ಕಸಬರಿಗೆ ತಯಾರಿಸುವ ಕಚ್ಚಾ ಸಾಮಗ್ರಿ ಸುಟ್ಟು ಕರಕಲಾಗಿದೆ.

ಹಳೆಯ ಫ್ಯಾಕ್ಟರಿ ಕಟ್ಟಡದ ಗೋದಾಮಿನಲ್ಲಿ ಅಕಸ್ಮಾತ್ ಕಾಣಿಸಿಕೊಂಡ ಬೆಂಕಿಯು ನಂತರ ಸಂಪೂರ್ಣ ಗೋದಾಮಿಗೆ ವ್ಯಾಪಿಸಿಕೊಂಡಿದೆ. ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಹತೋಟಿಗೆ ತರಲು ಪ್ರಯತ್ನಿಸಿದರು.

ಒಟ್ಟು ಮೂರು ಜಲ ಫಿರಂಗಿ ವಾಹನಗಳ ಮೂಲಕ ಸುಮಾರು ಎರಡು ತಾಸು ಹರಸಾಹಸಪಟ್ಟು ಬೆಂಕಿ ನಿಯಂತ್ರಿಸಿ ಹತೋಟಿಗೆ ತಂದರು. ಗೋದಾಮು ಪಕ್ಕದಲ್ಲಿಯೇ ಪಿನಾಯಿಲ್ ತಯಾರಿಸಲು ಬೇಕಾದ ಕಚ್ಚಾ ರಾಸಾಯನಿಕದ ಬ್ಯಾರೇಲ್‌ಗಳನ್ನು ಇಡಲಾಗಿತ್ತು. ಅದೃಷ್ಟವಶಾತ್ ಬೆಂಕಿ ಅವುಗಳತ್ತ ವ್ಯಾಪಿಸಿರಲಿಲ್ಲ.

ಆಕಾಶದ ತುಂಬೆಲ್ಲ ದಟ್ಟವಾದ ಕಪ್ಪು ಹೊಗೆ ಆವರಿಸಿಕೊಂಡಿತ್ತು. ಅವಘಡದಿಂದ ಸುತ್ತಮುತ್ತಲಿನ ಗ್ರಾಮದ ಜನರು ಆತಂಕಗೊಂಡಿದ್ದರು.

Related