ಗ್ರಾಮಗಳಿಗೆ ಮುಳುಗಡೆ ಭೀತಿ : ಪರಿಹಾರಕ್ಕೆ ಅನ್ನದಾತರ ಆಗ್ರಹ

ಗ್ರಾಮಗಳಿಗೆ ಮುಳುಗಡೆ ಭೀತಿ : ಪರಿಹಾರಕ್ಕೆ ಅನ್ನದಾತರ ಆಗ್ರಹ

ವಿಜಯಪುರ : ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ರಾಜ್ಯದ ಉತ್ತರ ಭಾಗದ ಜಿಲ್ಲೆಗಳ ನದಿಯಲ್ಲಿ ನೀರಿನ ಹರಿವಿನ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿದೆ. ಅದರಲ್ಲೂ ಉತ್ತರ ಕರ್ನಾಟಕದ ಜೀವನದಿ ಮತ್ತು ಗಂಡು ನದಿ ಎಂದೇ ಕರೆಯಲಾಗುವ ಕೃಷ್ಣಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಬೆಳಗಾವಿ ಜಿಲ್ಲೆಯಲ್ಲಿಯೂ ಭಾರಿ ಮಳೆಯಾಗುತ್ತಿರುವುದರಿಂದ ಆ ನದಿಯ ನೀರೂ ಕೃಷ್ಣಾ ನದಿಗೆ ಸೇರುತ್ತಿರುವುದರಿಂದ ಕೃಷ್ಣಾ ನದಿಗೆ ಮಹಾಪೂರ ಬಂದಿದೆ. ಆಲಮಟ್ಟಿ ಜಲಾಷಯಕ್ಕೆ ನೀರಿನ ಒಳಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈಗ 2.50 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹೊರ ಬಿಡಲಾಗುತ್ತಿದೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಹತ್ತಾರು ಗ್ರಾಮಗಳ ರೈತರು ಇದರಿಂದ ಕಂಗಾಲಾಗಿದ್ದಾರೆ. ನೂರಾರು ಎಕರೆ ಜಮೀನು ಜಲಾವೃತವಾಗಿದ್ದರಿಂದ ಬೆಳೆಗಳು ನೀರಿನಲ್ಲಿ ನಿಂತಿವೆ.

ನಿಡಗುಂದಿ ತಾಲೂಕಿನ ಅರಳದಿನ್ನಿ, ಯಲಗೂರು, ಕಾಶಿನಕುಂಟೆ, ಬೂದಿಹಾಳ, ಮಸೂತಿ ಗ್ರಾಮಗಳ ಜಮೀನುಗಳಿಗೆ ಕೃಷ್ಣಾ ನದಿ ನೀರು ನುಗ್ಗಿದ್ದು, ಮೊಣಕಾಲಿನವರೆಗೆ ನೀರು ನಿಂತಿದೆ. ಇದರಿಂದಾಗಿ ಈ ಹೊಲಗಳಲ್ಲಿ ಬೆಳೆಯಲಾದ ಸೂರ್ಯಕಾಂತಿ, ಕಬ್ಬು, ಗೋವಿನ ಜೋಳ ಸೇರಿ ಹಲವಾರು ಬೆಳೆಗಳು ಜಲಾವೃತವಾಗಿವೆ. ಅರಳದಿನ್ನಿ ಗ್ರಾಮದಲ್ಲಿ 25 ಏಕರೆ ಕಬ್ಬಿನ ಗದ್ದೆಯಲ್ಲಿ ನೀರು ನಿಂತಿದೆ.

ಇದರಿಂದಾಗಿ ಅನ್ನದಾತರು ಕಂಗಾಲಾಗಿದ್ದಾರೆ. ಪ್ರತಿವರ್ಷ ಉಂಟಾಗುತ್ತಿರುವ ಈ ಗೋಳನ್ನು ತಪ್ಪಿಸಬೇಕು ಮತ್ತು ರೈತರ ಬೆಳೆಹಾನಿಗೆ ಸೂಕ್ತ ಪರಿಹಾರ ನೀಡುವಂತೆ ರೈತ ಯಲಗೂದರಪ್ಪ ತುಬಾಕೆ ಮತ್ತು ಇತರ ಸಂತ್ರಸ್ತ ರೈತರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

Related