ರಿಯಲ್ ಎಸ್ಟೇಟ್ ಸಂಸ್ಥೆಯಿಂದ ಮಾಸ್ಟರ್ ಆನಂದ್ ಗೆ ದೋಖಾ

ರಿಯಲ್ ಎಸ್ಟೇಟ್ ಸಂಸ್ಥೆಯಿಂದ ಮಾಸ್ಟರ್ ಆನಂದ್ ಗೆ ದೋಖಾ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತಮ್ಮ ಚಿಕ್ಕ ವಯಸ್ಸಿನಿಂದಲೇ ನಟನೆ ಮಾಡುತ್ತಾ ಬಂದಿರುವಂತಹ ಮಾಸ್ಟರ್ ಆನಂದ್ ಅವರಿಗೆ ರಿಯಲ್ ಎಸ್ಟೇಟ್ ಸಂಸ್ಥೆ ಒಂದು ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು, ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಅವರಿಗೆ ಬೆಂಗಳೂರಿನ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ಮೋಸ ಮಾಡಿರುವ ಘಟನೆಯೊಂದು ವರದಿಯಾಗಿದೆ. ಈ ವಿಚಾರವಾಗಿ ಆನಂದ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಚಂದ್ರಾ ಲೇ ಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದು ಎರಡು ವರ್ಷಗಳ ಹಿಂದೆ ನಡೆದ ಘಟನೆ. ಬೆಂಗಳೂರಿನ ಕೊಮ್ಮಘಟ್ಟ ಪ್ರಾಂತ್ಯದಲ್ಲಿರುವ ರಾಮಸಂದ್ರ ಹಳ್ಳಿಯಲ್ಲಿ ಮಲ್ಟಿ ವೆಂಚರ್ಸ್ ಲೀಪ್ ಎಂಬ ರಿಯಲ್ ಎಸ್ಟೇಟ್ ಕಂಪನಿಯು ಲೇ ಔಟ್ ಮಾಡಿದೆ. 2021ರಲ್ಲಿ ಆ ಸೈಟುಗಳನ್ನು ನೋಡಿದ್ದ ಆನಂದ್ ಅವರು, ಅದರಲ್ಲಿ 200 ಚದರ ಮೀಟರ್ ಅಳತೆಯ ಸೈಟೊಂದನ್ನು ಖರೀದಿಸಿದ್ದರು. ಒಟ್ಟು 70 ಲಕ್ಷ ರೂ.ಗಳಿಗೆ ಮಾತುಕತೆಯಾಗಿತ್ತು.

ಹಂತಹಂತವಾಗಿ 18.5 ಲಕ್ಷ ನೀಡಿದ್ದ ಆನಂದ್

ಸೈಟು ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ, ಆನಂದ್ ಅವರು 18.5 ಲಕ್ಷ ರೂ.ಗಳನ್ನು ಮುಂಗಡ ರೂಪವಾಗಿ ನೀಡಿದ್ದರು. ಸೈಟಿನ ರಿಜಿಸ್ಟ್ರೇಷನ್ ವೇಳೆ, ಪೂರ್ತಿ ಹಣವನ್ನು ಕೊಡುವುದಾಗಿ ಮಾತುಕತೆ ನಡೆದಿದ್ದು ಆ ಬಗ್ಗೆ ಕರಾರು ಪತ್ರ ಸಹ ಆಗಿತ್ತು. ಆದರೆ, ಆನಂದ್ ಅವರು ಖರೀದಿಸಿದ್ದ ನಿವೇಶನವನ್ನು ಆ ಕಂಪನಿ ಗೌಪ್ಯವಾಗಿ ಬೇರೆಯವರಿಗೆ ಮಾರಾಟ ಮಾಡಿತ್ತು ಎಂದು ಹೇಳಲಾಗಿದೆ.

ಇದು ತಿಳಿದು ಆನಂದ್ ಅವರು ಕಂಪನಿಯನ್ನು ವಿಚಾರಿಸಿದ್ದಾರೆ. ಆದರೆ, ಕಂಪನಿಯು ಇವರಿಗೆ ಸೂಕ್ತವಾಗಿ ಸ್ಪಂದಿಸಿಲ್ಲ. ಆಗ ಬೇಸರಗೊಂಡ ಆನಂದ್ ಅವರು, ತಾವು ನೀಡಿದ್ದ ಮುಂಗಡ ಹಣವನ್ನು ಕೊಡಬೇಕೆಂದು ಕೇಳಿದಾಗ ಕಂಪನಿಯು ಆ ಮಾತಿಗೂ ಸ್ಪಂದಿಸಿಲ್ಲ. ಎರಡು ವರ್ಷಗಳೇ ಕಳೆದಿದ್ದರೂ ಕಂಪನಿಯು ಮುಂಗಡ ಹಣವನ್ನು ಕೊಡದಿದ್ದರಿಂದ ಬೇಸರವಾಗಿ ಅವರು ಠಾಣೆ ಮೆಟ್ಟಿಲೇರಿದ್ದಾರೆ ಎಂದು ಹೇಳಲಾಗಿದೆ. ಮಾಸ್ಟರ್ ಆನಂದ್ ನೀಡಿದ ದೂರನ್ನು ಸ್ವೀಕರಿಸಿರುವ ಚಂದ್ರಲೇಔಟ್ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related