ನಾಯಿ ಭೇಟೆ, ಚಿರತೆ ಅಂದರ್

ನಾಯಿ ಭೇಟೆ, ಚಿರತೆ ಅಂದರ್

ಚಾಮರಾಜನಗರ : ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆಯೊಂದು ಮನೆಯೊಳಗೆ ಸೇರಿಕೊಂಡು ಬಂಧಿಯಾದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬರಗಿ ಕಾಲೋನಿಯಲ್ಲಿ ನಡೆದಿದೆ.

ಬಂಡೀಪುರ ಅರಣ್ಯದಂಚಿನ ಗ್ರಾಮವಾದ ಬರಗಿಕಾಲೋನಿಗೆ ರಾತ್ರಿ ಚಿರತೆಯೊಂದು ಬಂದಿತ್ತು. ಈ ವೇಳೆ ನಾಯಿಯನ್ನು ಅಟ್ಟಾಡಿಸಿಕೊಂಡು ಹೋಗುತ್ತಿದ್ದ ಚಿರತೆ ಗ್ರಾಮದ ಮಹದೇವು ಎಂಬುವವರ ಮನೆಗೆ ಆಕಸ್ಮಿಕವಾಗಿ ನುಗ್ಗಿದೆ. ಸದ್ದು ಕೇಳಿದ ಮನೆಯವರು ಕತ್ತಲೆಯಲ್ಲಿ ಮನೆಗೆ ಯಾರೋ ನುಗ್ಗಿರಬೇಕು ಎಂದು ಲೈಟ್ ಆನ್ ಮಾಡಿದ್ದಾರೆ. ಮನೆಯೊಳಗಿದ್ದ ಚಿರತೆಯೂ ಸಹ ಗಾಬರಿಗೊಂಡು ಅಲ್ಮೆರಾ ಹಿಂಭಾಗ ಹೋಗಿ ಅಡಗಿ ಕುಳಿತಿದೆ.

ಸುತ್ತಮುತ್ತಲಿನವರಿಗೆ ವಿಷಯ ಗೊತ್ತಾಗಿ ಚಿರತೆ ಹೊರ ಹೋಗದಂತೆ ಮನೆಯ ಬಾಗಿಲು ಹಾಕಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಂಡೀಪುರದ ಗುಂಡ್ಲುಪೇಟೆ ವಲಯ ಅರಣ್ಯಾಧಿಕಾರಿ ಲೋಕೇಶ್, ಪಶುವೈದ್ಯ ಡಾ. ನಾಗರಾಜು ಅವರು ಅರಣ್ಯ ಸಿಬ್ಬಂದಿಯೊದಿಗೆ ಸ್ಥಳಕ್ಕೆ ಧಾವಿಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಮೆರಾ ಹಿಂಭಾಗ ಅಡಗಿ ನಿದ್ರಿಸುತ್ತಿದ್ದ ಚಿರತೆಗೆ ಗನ್ ಮೂಲಕ ಅರವಳಿಕೆ ಚುಚ್ಚು ಮದ್ದು ನೀಡಿ, ಕೆಲ ಸಮಯದ ನಂತರ ಪ್ರಜ್ಷೆ ತಪ್ಪಿ ಬಿದ್ದ ಚಿರತೆಯನ್ನು ಸೆರೆಹಿಡಿದು ಬಂಡೀಪುರ ಹುಲಿರಕ್ಷಿತಾರಣ್ಯಕ್ಕೆ ಬಿಟ್ಟಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ಐದು ವರ್ಷಗಳ ಹಿಂದೆಯು ಸಹ ಬರಗಿಕಾಲೋನಿಗೆ ಸಮೀಪವೇ ಇರುವ ಮುಂಟಿಪುರದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ನಾಯಿ ಬೇಟೆಯಾಡಲು ಬಂದು ಮನೆಯೊಂದಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸೆರೆಹಿಡಿಯಲಾಗಿತ್ತು.
ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಸಮರ್ಪಕ ಆನೆ ಕಂದಕ ಹಾಗು ಸೋಲಾರ್ ತಂತಿ ಹಾಕುವ ಮೂಲಕ ಕಾಡುಪ್ರಾಣಿಗಳ ಹಾವಳಿ ತಪ್ಪಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

Related