ಬರಹಗಾರರಿಗೆ ಕೊಲೆ ಬೆದರಿಕೆ..!

ಬರಹಗಾರರಿಗೆ ಕೊಲೆ ಬೆದರಿಕೆ..!

ಏಪ್ರಿಲ್‌‌ ತಿಂಗಳಿನಿಂದಲೂ ಏಳು ಬರಹಗಾರರು ಸ್ವೀಕರಿಸಿರುವ ಕನಿಷ್ಠ 19 ಕೊಲೆ ಬೆದರಿಕೆ ಪತ್ರಗಳ ತನಿಖೆಗೆ ಪೊಲೀಸ್ ಅಧೀಕ್ಷಕ (ಎಸ್‌ಪಿ) ಶ್ರೇಣಿಯ ಅಧಿಕಾರಿಯನ್ನು ಕರ್ನಾಟಕ ಪೊಲೀಸ್‌ ಇಲಾಖೆ ನೇಮಿಸಿದೆ.

ಕೊಲೆ ಬೆದರಿಕೆಗಳು ಬಂದರೂ ಎಫ್‌ಐಆರ್‌ಗಳು ದಾಖಲಾಗಿಲ್ಲ, ಪೋಲೀಸರ ನಿಷ್ಕ್ರಿಯರಾಗಿದ್ದಾರೆ ಎಂದು ಲೇಖಕರು ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

“ಒಬ್ಬನೇ ವ್ಯಕ್ತಿ ಎಲ್ಲಾ ಬರಹಗಾರರಿಗೆ ಈ ಬೆದರಿಕೆ ಪತ್ರಗಳನ್ನು ಬರೆಯುತ್ತಿರುವುದು ಸ್ಪಷ್ಟವಾಗಿದೆ. ಕೆಲವು ಲೋಪಗಳಾಗಿವೆ, ಆದರೂ ತನಿಖೆಗಳು ಈಗಾಗಲೇ ನಡೆಯುತ್ತಿವೆ. ಈಗ ತನಿಖೆಯನ್ನು ಹೆಚ್ಚು ಸಂಘಟಿತ ರೀತಿಯಲ್ಲಿ ಮಾಡಲಾಗುತ್ತದೆ ” ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ದಿ ಹಿಂದೂ’  ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಸಹಿಷ್ಣು ಹಿಂದೂ’ಎಂದು ಸಹಿ ಹಾಕಿರುವ ವ್ಯಕ್ತಿಯು ಏಳು ಬರಹಗಾರರಿಗೆ 19 ಕೊಲೆ ಬೆದರಿಕೆ ಪತ್ರಗಳನ್ನು ಬರೆದಿದ್ದಾನೆ. ಈ ಬರಹಗಾರರ ನಿಲುವುಗಳನ್ನು “ಹಿಂದೂ ವಿರೋಧಿ” ಎಂದು ಕರೆದಿದ್ದಾನೆ. ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ ಆರು ಪತ್ರ, ಚಿಂತಕ ಬಂಜಗೆರೆ ಜಯಪ್ರಕಾಶ್ ಅವರಿಗೆ ಐದು ಪತ್ರ ಬಂದಿವೆ.  ಹಿಜಾಬ್ ವಿವಾದದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬಹಿರಂಗ ಪತ್ರ ಬರೆದ 61 ಬರಹಗಾರರನ್ನು ಪಟ್ಟಿ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ   ಹಾಕಲಾಗಿದೆ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಕೆ. ಹರಿಪ್ರಸಾದ್ ಅವರನ್ನೂ ಟಾರ್ಗೆಟ್ ಮಾಡಲಾಗಿದೆ.

 

 

Related