ರಾಮನಗರದಲ್ಲಿ ಅಬ್ಬರಿಸಿದ ಡಿಸಿಎಂ

ರಾಮನಗರದಲ್ಲಿ ಅಬ್ಬರಿಸಿದ ಡಿಸಿಎಂ

ರಾಮನಗರ: ಕರ್ನಾಟಕ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಕೇವಲ ಮೂರು ದಿನಗಳ ಬಾಕಿ ಇದ್ದು, ಇಂದು ಚುನಾವಣೆಯ ಪ್ರಚಾರಕ್ಕೆ ಕೊನೆಯ ದಿನವಾಗಿದ್ದು ಎಲ್ಲಾ ಪಕ್ಷದ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರವನ್ನು ತೊಡಗಿದ್ದಾರೆ.

ಇನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ರಾಮನಗರದ ಹಾರೋಹಳ್ಳಿಯಲ್ಲಿ ಅಬ್ಬರದ ಪ್ರಚಾರವನ್ನು ಕೈಗೊಂಡಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಅವರು,ನಾನು ಕಳೆದ 30 ವರ್ಷಗಳಿಂದ ಈ ತಾಲೂಕಿನಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಇಂದು ಈ ಪಂಚಾಯ್ತಿಯಲ್ಲಿ ಸೇರಿರುವ ಜನ ಇತಿಹಾಸದಲ್ಲೇ ಬೇರೆ ಯಾವುದೇ ಪಕ್ಷಕ್ಕೆ ಸೇರಿಲ್ಲ. ನೀವೆಲ್ಲರೂ ನಮ್ಮ ಮಾತಿಗೆ ಬೆಲೆ ಕೊಟ್ಟು ಇಕ್ಬಾಲ್ ಹುಸೇನ್ ಅವರನ್ನು ವಿಧಾನಸಭೆಗೆ ಕಳುಹಿಸಿದ್ದೀರಿ. ಅದಕ್ಕಾಗಿ ನಾನು ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ.

ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಡಿ.ಕೆ. ಸುರೇಶ್ ಅವರ ಹೋರಾಟಕ್ಕೆ ನಿನ್ನೆ ಸುಪ್ರೀಂ ಕೋರ್ಟ್ ಜಯ ಕೊಟ್ಟಿದೆ. ಕರ್ನಾಟಕಕ್ಕೆ ಬರಗಾಲದಲ್ಲಿ ಹಣ ನೀಡಬೇಕು, ತೆರಿಗೆ ಪಾಲನ್ನು ನ್ಯಾಯಯುತವಾಗಿ ನೀಡಬೇಕು ಎಂದು ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕೇಂದ್ರ ಸರ್ಕಾರ ಮುಂದಿನ ಒಂದು ವಾರದಲ್ಲಿ ಬರ ಪರಿಹಾರ ನೀಡಲಾಗುವುದು ಎಂದು ನ್ಯಾಯಾಲಯದಲ್ಲಿ ಹೇಳಿದೆ. ಇದು ಡಿ.ಕೆ. ಸುರೇಶ್ ಅವರ ಹೋರಾಟದ ಫಲ.

ಡಿ.ಕೆ. ಸುರೇಶ್ ಅವರನ್ನು ಸಂಸದರಾಗಿ ಆಯ್ಕೆ ಮಾಡಿರುವ ನಿಮಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಕರ್ನಾಟಕಕ್ಕೆ ಯಾವುದೇ ಹಣ ಬಾಕಿ ಇಲ್ಲ ಎಂದು ಹೇಳಿದ್ದರು. ಅವರ ಮಾತಿಗೆ ಕೋರ್ಟ್ ಈಗ ಉತ್ತರ ನೀಡಿದೆ.

ಇಲ್ಲಿ ದೇವೇಗೌಡರು ಬಂದು ಅವರ ಅಳಿಯನ್ನು ಬಿಜೆಪಿ ಪಕ್ಷದಿಂದ ನಿಲ್ಲಿಸಿದ್ದಾರೆ. ಗೌಡರೇ, ಕುಮಾರಣ್ಣ ಇಷ್ಟು ದಿನ ನೀವು ಕಟ್ಟಿದ ಜನತಾ ದಳ ಏನಾಯ್ತು? ನಿಮ್ಮ ಅಳಿಯನನ್ನು ತೆನೆಯೊತ್ತ ರೈತ ಮಹಿಳೆ ಚಿಹ್ನೆಯಲ್ಲಿ ಯಾಕೆ ನಿಲ್ಲಿಸಲಿಲ್ಲ ಎಂದು ಈ ಜನರು ಕೇಳುತ್ತಿದ್ದಾರೆ. ಕುಮಾರಣ್ಣ ನಿನಗೆ ಪಕ್ಷ, ಪಕ್ಷದ ಚಿಹ್ನೆ ಬೇಕಾಗಿಲ್ಲ ಎಂದು ಬಿಜೆಪಿಯಿಂದ ನಿಲ್ಲಿಸಿದ್ದೀರಿ. ಇಂತಹ ಪರಿಸ್ಥಿತಿಯಲ್ಲಿ, ದಳದ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು ಎಂದು ನಾನು ಪ್ರಶ್ನೆ ಕೇಳ ಬಯಸುತ್ತೇನೆ.

ಕೆರೆ ಕಮಲದಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈಗೆ ಅಧಿಕಾರ ಬಂದ ಕೈ ಮೊದಲ ದಿನವೇ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಅನುಷ್ಠಾನಕ್ಕೆ ತಂದಿದ್ದೇವೆ. ನಿಮ್ಮೆಲ್ಲರಿಗೂ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಸಿಗುತ್ತಿದೆಯಲ್ಲವೇ? ಬಡ ಕುಟುಂಬದ ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ ತಲುಪುತ್ತಿದೆ. ರಾಜ್ಯದ ಎಲ್ಲಾ ಮಹಿಳೆಯರು ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಅನ್ನಭಾಗ್ಯ ಯೋಜನೆ ಮೂಲಕ 5 ಕೆ.ಜಿ ಅಕ್ಕಿ, ಉಳಿದ 5 ಕೆ.ಜಿ ಅಕ್ಕಿಯ ಹಣವನ್ನು ನೀಡಲಾಗುತ್ತಿದೆ. ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ಸಿಗುತ್ತಿದೆ. ಇಂತಹ ಯಾವುದಾದರೂ ಒಂದು ಕೆಲಸವನ್ನು ಕುಮಾರಸ್ವಾಮಿ, ಯಡಿಯೂರಪ್ಪ, ದೇವೇಗೌಡರು, ಮಂಜುನಾಥ್ ಅವರು ಮಾಡಿದ್ದಾರಾ? ಇವರೆಲ್ಲರೂ ಸೇರಿ ನಿಮಗೆ ಚೊಂಬು ಕೊಟ್ಟಿದ್ದಾರೆ ಎಂದರು.

 

Related