ಡಿಸಿ ಹಾಗೂ ಎಸಿ, ತಹಶೀಲ್ದಾರರುಗಳ ಗ್ರಾಮ ವಾಸ್ತವ್ಯ

ಡಿಸಿ ಹಾಗೂ ಎಸಿ, ತಹಶೀಲ್ದಾರರುಗಳ ಗ್ರಾಮ ವಾಸ್ತವ್ಯ

ತುಮಕೂರು  : ಕಂದಾಯ ಇಲಾಖೆಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಫೆ. 20ರ 3ನೇ ಶನಿವಾರದಂದು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಲಕ್ಷ್ಮಿಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ ಅವರು ವಾಸ್ತವ್ಯ ಮಾಡಿ ಗ್ರಾಮದಲ್ಲಿನ ರೈತರ ಜಮೀನುಗಳ ಪಹಣಿ ಲೋಪದೋಷ, ಪಿಂಚಣಿ, ರೇಷನ್ ಕಾರ್ಡ್, ಮತ್ತಿತರ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಜಿಲ್ಲೆಯ ತಹಶೀಲ್ದಾರರುಗಳಿಗೆ ಹಾಗೂ ಉಪವಿಭಾಗಾಧಿಕಾರಿಗಳಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಅವರು, ಸರ್ಕಾರದ ಸುತ್ತೋಲೆಯನ್ವಯ ಮುಂಬರುವ ಫೆಬ್ರವರಿ 20ರಂದು ಹಾಗೂ ಪ್ರತಿ ತಿಂಗಳ 3ನೇ ಶನಿವಾರದಂದು ಕೈಗೊಳ್ಳಬೇಕಾಗಿರುವ ಗ್ರಾಮಭೇಟಿ ಹಾಗೂ ಹಳ್ಳಿ ವಾಸ್ತವ್ಯದ ಬಗ್ಗೆ ನಿರ್ದೇಶನ ನೀಡಿದರು.

ಫೆ. 20ರಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿರುವ ಜಿಲ್ಲಾಧಿಕಾರಿಗಳ ಗ್ರಾಮ ಭೇಟಿಯಲ್ಲಿ ಮಧುಗಿರಿ ಉಪವಿಭಾಗಾಧಿಕಾರಿ, ಮಧುಗಿರಿ ತಾಲ್ಲೂಕಿನ ತಹಶೀಲ್ದಾರ್, ಕೃಷಿ, ತೋಟಗಾರಿಗೆ, ಆರೋಗ್ಯ, ಆಹಾರ, ಸಮಾಜ ಕಲ್ಯಾಣ, ಮತ್ತಿತರ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ಆಯಾ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹಾಗೂ ಮಾಹಿತಿ ನೀಡಲಿದ್ದಾರೆ.

ಇದೇ ಮಾದರಿಯಲ್ಲಿ ಜಿಲ್ಲಾಧಿಕಾರಿಗಳು ಭೇಟಿ ನೀಡುವ ತಾಲ್ಲೂಕನ್ನು ಹೊರತುಪಡಿಸಿ ಅಂದೇ ಇತರೆ ತಾಲ್ಲೂಕುಗಳ ತಹಶೀಲ್ದಾರರುಗಳು ಹಾಗೂ ಉಪವಿಭಾಗಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಹಾಗೂ ಹಳ್ಳಿ ವಾಸ್ತವ್ಯ ಮಾಡಲಿದ್ದಾರೆ.

ಅದರಂತೆ ಫೆಬ್ರವರಿ 20ರಂದು ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಮುಗ್ಳೂರು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆ ಹೋಬಳಿಯ ಹಂದನಕೆರೆ ಗ್ರಾಮ, ತುಮಕೂರು ತಾಲ್ಲೂಕಿನ ಊರ್ಡಿಗೆರೆ ಹೋಬಳಿಯ ಬ್ಯಾತಗ್ರಾಮ, ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಹುಲಿಕುಂಟೆ, ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಸಿಂಗೋನಹಳ್ಳಿ, ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ವೆಂಕಟಮ್ಮನಹಳ್ಳಿ, ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಕೋಡ್ಲಹಳ್ಳಿ, ತಿಪಟೂರು ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ವಿಜ್ಞಸಂತೆ, ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿಯ ಜಿ.ಹೊಸಹಳ್ಳಿಯಲ್ಲಿ ಸಂಬಂಧಪಟ್ಟ  ತಾಲ್ಲೂಕುಗಳ ತಹಶೀಲ್ದಾರರುಗಳು ಗ್ರಾಮಗಳ ಭೇಟಿ ಮತ್ತು ಗ್ರಾಮವಾಸ್ತವ್ಯ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಅಜಯ್, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರಾಜಸುಲೋಚನಾ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಘು, ಡಿಹೆಚ್‌ಒ ಡಾ: ನಾಗೇಂದ್ರಪ್ಪ, ತಹಶೀಲ್ದಾರ್ ಮೋಹನ್ ಕುಮಾರ್, ಮತ್ತಿತರೆ ಅಧಿಕಾರಿಗಳು ಹಾಜರಿದ್ದರು.

Related