ಕರೊನಾ ಹರಡುವಿಕೆಗೆ ಮುಸ್ಲಿಂರೇ ಕಾರಣರಲ್ಲ: ಶಾಸಕ ನಡಹಳ್ಳಿ

ಕರೊನಾ ಹರಡುವಿಕೆಗೆ ಮುಸ್ಲಿಂರೇ ಕಾರಣರಲ್ಲ: ಶಾಸಕ ನಡಹಳ್ಳಿ

ಮುದ್ದೇಬಿಹಾಳ : ಕರೊನಾ ವೈರಸ್ ಹರಡುವುದಕ್ಕೆ ಮುಸ್ಲಿಂ ಸಮುದಾಯ ಒಂದೇ ಕಾರಣವಲ್ಲ. ಯಾರೋ ನಾಲ್ಕು ಜನರು ಮಾಡುವ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನೇ ಹೊಣೆಯನ್ನಾಗಿ ಮಾಡುವುದು ಸರಿಯಲ್ಲ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅಭಿಪ್ರಾಯಪಟ್ಟಿದ್ದಾರೆ.

ಅಲ್ಪಸಂಖ್ಯಾತರು ಹೆಚ್ಚು ವಾಸವಾಗಿರುವ ಮಹಿಬೂಬ ನಗರ, ಶೆಡ್‍ನಲ್ಲಿ ವಾಸಿಸುತ್ತಿರುವ ಮುಸ್ಲಿಂ ಸಮಾಜದ ಬಾಂಧವರಿಗೆ ಶಾಸಕ ನಡಹಳ್ಳಿ ಅವರು ಕಿಟ್ ವಿತರಿಸಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯವರ ಮೇಲೆ ಕೆಲವರು ಗೂಬೆ ಕೂರಿಸುವ ಕುತಂತ್ರ ನಡೆಸಿದ್ದಾರೆ. ಹಿಂದೂಗಳಲ್ಲಷ್ಟೇ ಅಲ್ಲದೇ ಮುಸ್ಲಿಂ ಸಮಾಜದಲ್ಲೂ ಬಡವರಿದ್ದಾರೆ. ಯಾರಿಗೂ ಬೇಧ ಭಾವ ಮಾಡದೇ ಎಲ್ಲ ಬಡವರಿಗೂ ಕಿಟ್ ನೀಡಿದ್ದೇನೆ ಎಂದು ಹೇಳಿದರು.

ಮುಸ್ಲಿಂ ಸಮಾಜದ ಯುವಕರು ಸಾಮಾಜಿಕ ಅಂತರ ಪಾಲನೆ ಮಾಡುವುದು, ಗುಂಪಾಗಿ ನಿಲ್ಲುವುದು ಮಾಡಬೇಡಿ, ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿ, ಈ ಸಂದರ್ಭದಲ್ಲಿ ಮಸೀದಿಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ನಿಲ್ಲಿಸಬೇಕು. ಕರೊನಾ ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ಮಾಡಬಾರದು ಎಂದು ಮನವಿ ಮಾಡಿದರು.

ಶಾಸಕನಾಗಿ, ತಾಲೂಕಿನ ಮಗನಾಗಿ ನಾನು ಬಡವರ ಜೊತೆಗೆ ಇದ್ದೇನೆ. ಕರೊನಾ ಸಂದರ್ಭದಲ್ಲಿ ಬಡವರು ಹಸಿವಿನಿಂದ ಬಳಲಬಾರದು ಎಂದು ನಮ್ಮ ಕುಟುಂಬದಿಂದ ಕಡು ಬಡವರಿಗೆ ದಿನಸಿ ಕಿಟ್ ನೀಡುತ್ತಿದ್ದೇವೆ.ಈಗಾಗಲೇ 20 ವಾರ್ಡಗಳಲ್ಲಿ ಬಡವರನ್ನು ಗುರುತಿಸಿ ಕಿಟ್ ವಿತರಿಸಲಾಗಿದೆ ಎಂದು ಹೇಳಿದರು.

Related