ಪ್ರತಿಭಟನೆ ಹಿಂಪಡೆದ ಕಾಂಗ್ರೆಸ್

ಪ್ರತಿಭಟನೆ ಹಿಂಪಡೆದ ಕಾಂಗ್ರೆಸ್

ಬೆಂಗಳೂರು, ಮಾ. 04: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿಧಾನ ಪರಿಷತ್‌ನಲ್ಲಿ ಪ್ರತಿಭಟನೆ ನಡೆಸಿದ ಪ್ರತಿಪಕ್ಷ ಕಾಂಗ್ರೆಸ್ ಬುಧವಾರ ಧರಣಿಯನ್ನು ಹಿಂಪಡೆಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಧರಣಿ ಮುಂದುವರೆಸಲು ಮುಂದಾದರು. ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್, ನಮಗೆ ನಿಯಮ 342ರ ಅಡಿ ಚರ್ಚೆಗೆ ಅವಕಾಶ ಕೊಡಬೇಕೆಂದು ನಾನು ನೋಟಿಸ್ ನೀಡಿದ್ದೇನೆ. ಇದೊಂದು ಸಾರ್ವಜನಿಕ ಮಹತ್ವದ ವಿಷಯವಾಗಿರುವುದರಿಂದ ನೀವು ಅವಕಾಶ ನೀಡಬೇಕೆಂದು ಸಭಾಪತಿಗಳಿಗೆ ಮನವಿ ಮಾಡಿದರು. ಈ ವೇಳೆ ಜೆಡಿಎಸ್‌ನ ಬಸವರಾಜ ಹೊರಟ್ಟಿ, ಈಗಾಗಲೇ ಒಂದು ದಿನ ಸಮಯ ವ್ಯರ್ಥವಾಗಿದೆ. ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಕೋಟ್ಯಂತರ ರೂ. ಖರ್ಚು ಮಾಡಿ ಕಲಾಪ ನಡೆಸುವುದು ವ್ಯರ್ಥವಾಗಬಾರದು. ಸಭಾಪತಿಗಳು ಚರ್ಚೆಗೆ ಅವಕಾಶ ಕೊಟ್ಟಿದ್ದರೆ, ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದರು.

ಈ ವೇಳೆ ಸಭಾನಾಯಕ ಕೋಟಾ ಶ್ರೀನಿವಾಸ್‌ಪೂಜಾರಿ ಅವರು, ವಿರೋಧ ಪಕ್ಷದ ಸದಸ್ಯರು ಏನೇ ವಿಷಯ ಪ್ರಸ್ತಾಪಿಸಿದರೂ ಸರ್ಕಾರ ಉತ್ತರ ನೀಡಲು ಸಿದ್ದವಿದೆ. ನಿಯಮ ೩೪೨ರ ಅಡಿಯಲ್ಲಿ ಇದನ್ನು ಚರ್ಚೆಗೆ ತೆಗೆದುಕೊಳ್ಳಬೇಕೆ ಎಂಬುದನ್ನು ನೀವು ನಿರ್ಧರಿಸಬೇಕೆಂದು ಮನವಿ ಮಾಡಿದರು.

ಆಗ ಎಸ್.ಆರ್.ಪಾಟೀಲ್, ಸಭಾಪತಿಗಳು ತಮಗಿರುವ ವಿಶೇಷ ಅಧಿಕಾರವನ್ನು ಬಳಸಿಕೊಂಡು ಚರ್ಚೆಗೆ ಅವಕಾಶ ಕೊಡಬಹುದು ಎಂದು ತಿಳಿಸಿದರು. ಸಭಾಪತಿಯವರು ಚರ್ಚೆಗೆ ಅವಕಾಶ ಕೊಡುತ್ತಿದ್ದಂತೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ತಮ್ಮ ಧರಣಿಯನ್ನು ಹಿಂಪಡೆದರು.

Related