ಚುನಾವಣೆ ಗೆಲುವಿಗೆ ನಾಯಕರ ಒಗ್ಗಟ್ಟಿನ ಮಂತ್ರ

ಚುನಾವಣೆ ಗೆಲುವಿಗೆ ನಾಯಕರ ಒಗ್ಗಟ್ಟಿನ ಮಂತ್ರ

ದೊಡ್ಡಬಳ್ಳಾಪುರ : ತಾಲೂಕಿನ ಜಾತ್ಯಾತೀತ ಜನತಾದಳ (ಜೆಡಿಎಸ್) ನಾಯಕರು ನಗರಸಭೆ ಚುನಾವಣೆ ಗೆಲುವಿಗೆ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಅವರ ಮಾರ್ಗಸೂಚಿ ಮೇರೆಗೆ ಒಂದಾಗಿರುವ ಜೆಡಿಎಸ್ ನಾಯಕರು ನಗರಸಭೆ ಚುನಾವಣೆ ಗೆಲ್ಲುವ ಹಾದಿಯಲಿ ಹೊರಟಿದ್ದಾರೆ.

ಈ ಕುರಿತು ಭಾನುವಾರ ಬೆಂಗಳೂರು ಗ್ರಾಮಾಂತರ ಜೆಡಿಎಸ್ ಘಟಕದ ಅಧ್ಯಕ್ಷ ಬಿ. ಮುನೇಗೌಡ, ಜಿ.ಪಂ ಮಾಜಿ ಅಧ್ಯಕ್ಷ ಅಪ್ಪಯ್ಯಣ್ಣ ಸೇರಿದಂತೆ ಉಳಿದ ಮುಖಂಡರು ಜಂಟಿ ಸುದ್ದಿಗೋಷ್ಠಿ ನಡೆಸಿ, “ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಸೇರಿಕೊಂಡು ನಗರಸಭೆಯ ಚುನಾವಣೆ ಎದುರಿಸುತ್ತಿದ್ದೇವೆ. ಈ ಬಾರಿ ಸ್ಪಷ್ಟ ಬಹುಮತ ಪಡೆದು ನಗರಸಭೆಯ ಚುಕ್ಕಾಣಿ ಹಿಡಿಯಲು ಶ್ರಮಿಸುತ್ತೇವೆ ಎಂದು ತಿಳಿಸಿದರು.

ಬಿ. ಮುನೇಗೌಡ ಮಾತನಾಡಿ, ತಾಲೂಕಿನ ಜೆಡಿಎಸ್ ಘಟಕದಲ್ಲಿ ಇಬ್ಭಾಗ ಆಗಿರಲಿಲ್ಲ. ಬಣಗಳೂ ಉಂಟಾಗಿರಲಿಲ್ಲ ಎಂದು ಸಮರ್ಥಿಸಿಕೊಂಡರು. ಅಷ್ಟೇ ಅಲ್ಲದೆ ನಗರಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕಿದೆ. ಈ ಹಿಂದೆ ನಗರಸಭೆ ಅಧಿಕಾರವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತಿದ್ದೇವೆ. 31 ವಾರ್ಡ್ಗಳಲ್ಲಿಯೂ ಪಕ್ಷದ ಕಣಕ್ಕೆ ಅಭ್ಯರ್ಥಿಗಳನ್ನು ಇಳಿಸುತ್ತಿದ್ದೇವೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರತಿಯೊಂದು ವಾರ್ಡ್ಗೂ ಕೂಡ ಒಬ್ಬೊಬ್ಬ ಮುಖಂಡರಿಗೆ ಜವಾಬ್ದಾರಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪೂರ್ಣಗೊಂಡ ಬಳಿಕ ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿಗಳು ಎಲ್ಲರ ಜೊತೆ ಚರ್ಚಿಸಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

ನಗರ ಘಟಕದ ಅಧ್ಯಕ್ಷ ವಿ.ಎಸ್ ರವಿಕುಮಾರ್ ಮಾತನಾಡಿ, ಪಕ್ಷದ ಎಲ್ಲ ಫಟಕಗಳ ಮುಖಂಡರ, ಕಾರ್ಯಕರ್ತರ ಅಭಿಪ್ರಾಯಕ್ಕೆ ಬೆಲೆ ನೀಡಿ ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ನೀಡಲಾಗಿದೆ. ಬಹುತೇಕ ಎಲ್ಲ ಅಭ್ಯರ್ಥಿಗಳಿಗೂ ಬಿ ಫಾರಂ ನೀಡುತ್ತೇವೆ. ಜೊತೆಗೆ ಈ ಹಿಂದೆ ನಗರಸಭೆಯಲ್ಲಿ ಅಧಿಕಾರ ಹೊಂದಿದ ಸಂದರ್ಭದಲ್ಲಿ ಮಾಡಿದ ಖಾತಾ ಅದಾಲತ್, ನಗರಸಭೆಯ ಆದಾಯ ಹೆಚ್ಚಳ, ಒಳಚರಂಡಿ ವ್ಯವಸ್ಥೆ ಕುಡಿಯುವ ನೀರಿನ ಪೂರೈಕೆಗೆ ಕೈಗೊಂಡ ಕ್ರಮಗಳು ಸೇರಿ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊAಡು ಚುನಾವಣೆ ಎದುರಿಸುತ್ತಿದ್ದೇವೆ. ಈ ಬಾರಿ ಸ್ಪಷ್ಟ ಬಹುಮತ ಪಡೆದು ನಗರಸಭೆ ಚುಕ್ಕಾಣಿ ಹಿಡಿಯುತ್ತೇವೆ ಎಂದರು.

Related