ಗಿಡ-ಮರಗಳ ತೆರವು ಮನನೊಂದ : ಹನುಮಂತ

ಗಿಡ-ಮರಗಳ ತೆರವು ಮನನೊಂದ : ಹನುಮಂತ

ಮಹಾಲಿಂಗಪುರ : ಗ್ರಾಮ, ಪಟ್ಟಣಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವಾಗ ಸ್ಥಳೀಯ ಆಡಳಿತಕ್ಕೆ ತೊಂದರೆಗಳು ಬರುವುದು ಸಹಜ, ಇದನ್ನೇ ಮಾನದಂಡವಾಗಿ ಇಟ್ಟುಕೊಂಡು ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಲಾಗುವುದಿಲ್ಲ ಪರಿಹಾರ ಕಂಡುಕೊಂಡು ಕೆಲಸ ಮಾಡಬೇಕಾಗುತ್ತದೆ ಎಂದು ಭಾಜಪಾ ಧುರೀಣರಾದ ಹನುಮಂತ ಜಮಾದಾರ ಹೇಳಿದರು.
ಭಾಜಪ ಯುವ ಮೋರ್ಚಾ, ನಾಗರಿಕ ಹಿತರಕ್ಷಣಾ ಸಮಿತಿ ಜಂಟಿಯಾಗಿ ಸ್ಥಳೀಯ ಜಿಎಲ್‌ಬಿಸಿ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಪ್ರಾಚೀನ ಗುಡ್ಡದ ಭಾವಿ ಮೇಲೆ ಇದ್ದ ಎರಡು ಗಿಡಗಳನ್ನು ಪುರಸಭೆ ವತಿಯಿಂದ ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಈ ಸಮಯದಲ್ಲಿ ಮರದಲ್ಲಿ ೫-೬ ನವಜಾತ ಪಕ್ಷಿಗಳು ಅಸುನೀಗಿದ್ದಕ್ಕೆ ನಾವೂ ಸಹ ವಿಷಾದಿಸುತ್ತೇವೆ.
ಸದರಿ ಮರಗಳು ಮುಧೋಳ- ನಿಪ್ಪಾಣಿ ರಾಜ್ಯ ಹೆದ್ದಾರಿಯ ಪಟ್ಟಣದ ಹೃದಯ ಭಾಗದಲ್ಲಿರುವುದರಿಂದ ಸದರಿ ಸ್ಥಳದಲ್ಲಿ ನಿರೀಕ್ಷೆಯ ಮೂವತ್ತು ಲಕ್ಷ ರೂಪಾಯಿಗಳ ಅನುದಾನದಡಿಯಲ್ಲಿ ಕಾಂಪ್ಲೆಕ್ಸ್ ನಿರ್ಮಾಣಕ್ಕಾಗಿ ಮರಗಳ ತೆರವಿಗೆ ಅರಣ್ಯ ಹಾಗೂ ಪರಿಸರ ಇಲಾಖೆಗಳಿಗೆ ಮನವಿ ಸಹ ಮಾಡಲಾಗಿದೆ. ಇಲ್ಲಿ ವಿಭಿನ್ನ ರೀತಿಯ ವ್ಯಾಪಾರ ಮಳಿಗೆಗಳನ್ನು ನಿರ್ಮಿಸಿ ಪುರಸಭೆಗೆ ಆದಾಯ, ಹಲವಾರು ನಿರುದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ ಉದ್ಯೋಗಾವಕಾಶ ಒದಗುತ್ತದೆ. ಆರ್ಥಿಕ ಅಭಿವೃದ್ಧಿಗೂ ಕಾರಣವಾಗುತ್ತದೆ. ಇದು ಅನೇಕ ಆರ್ಥಿಕ ಅಸಬಲರಿಗೆ ಪೂರವಾಗಬಲ್ಲ ಸಮಾಜಮುಖಿ ಕಾಮಗಾರಿಯಾಗಿದೆ. ಪಟ್ಟಣದ ಅಭಿವೃದ್ಧಿ ಸಹಿಸದ ಕೆಲವರು ವೃಥಾ ಆರೋಪ ಮಾಡಿ ಕಾಮಗಾರಿ ನಿಲ್ಲಿಸುವ ಹುನ್ನಾರ ಮಾಡುತ್ತಿರುವುದು ಸರಿಯಲ್ಲ ಇದರಲ್ಲಿ ರಾಜಕೀಯ ಬೆರೆಸಬೇಡಿ ಪಟ್ಟಣದ ಅಭಿವೃದ್ಧಿಯ ಕೆಲಸದಲ್ಲಿ ಪುರಸಭೆಗೆ ಸಹಕರಿಸಿ ಎಂದರು.
ನಾಗರಿಕ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷ ಸಿದ್ದು ಶಿರೋಳ ಮಾತನಾಡಿ, ಅಭಿವೃದ್ಧಿ ಸಂದರ್ಭದಲ್ಲಿ ಚಿಕ್ಕ ತೊಂದರೆಗಳು ಸಾಮಾನ್ಯ, ಅದನ್ನೇ ನೆಪವಾಗಿಟ್ಟುಕೊಂಡು ಹಲವರು ಮಾಡುವ ವಿರೋಧ ಕಾರ್ಯತಂತ್ರಗಳಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಮಳಿಗೆ ನಿರ್ಮಾಣ, ರಸ್ತೆ ಅಗಲೀಕರಣದಂತಹ ಸಂದರ್ಭಗಳಲ್ಲಿ ಮರಗಳ ತೆರವು ಮಾಡುವುದು, ಅಲ್ಲಿ ಕೆಲ ತೊಂದರೆಗಳು ಸಾಮಾನ್ಯ ವಿಷಯ. ಇದನ್ನೇ ನೆಪವಾಗಿಟ್ಟುಕೊಂಡು ಕೆಲವರು ಇಲಾಖೆ ಮತ್ತು ಅಧಿಕಾರಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಮಾತ್ರ ಸರಿಯಲ್ಲ ಎಂದರು.

Related