ರಾಜ್ಯದಲ್ಲಿ ಬರ ಸಮೀಕ್ಷೆ ನಡೆಸಲು ನಾಳೆ ಕೇಂದ್ರದ ತಂಡ ಭೇಟಿ..?

ರಾಜ್ಯದಲ್ಲಿ ಬರ ಸಮೀಕ್ಷೆ ನಡೆಸಲು ನಾಳೆ ಕೇಂದ್ರದ ತಂಡ ಭೇಟಿ..?

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ಬರಗಾಲ ಪರಿಸ್ಥಿತಿ ಎದುರಾಗಿ ರೈತ ಸಂಕಷ್ಟಕ್ಕೆ ಒಳಗಾದ ಹಿನ್ನೆಲೆಯಲ್ಲಿ,ಬರ ಸಮೀಕ್ಷೆಗಾಗಿ ನಾಳೆ ರಾಜ್ಯಕ್ಕೆ ಕೇಂದ್ರ ಸರ್ಕಾರದ ಮೂರು ತಂಡಗಳು ಭೇಟಿ ನೀಡಲಿದೆ. ಒಟ್ಟು 12 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆದರೆ ಈ ಸಮೀಕ್ಷೆಯ ಪ್ರವಾಸಕ್ಕೂ ಮುನ್ನ ನಾಳೆ ಕೇಂದ್ರ ತಂಡದ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿ ಚರ್ಚಿಸಲಿದ್ದಾರೆ.

ರಾಜ್ಯದಲ್ಲಿ ಈ ಬಾರಿ ವಾಡಿಕೆಯಷ್ಟು ಮಳೆ ಬಾರದೆ ರೈತ ತಾನು ಬೆಳೆದ ಬೆಳೆ ತಾನೆ ಕಿತ್ತಿ ಹಾಕುವ ದುಸ್ಥಿತಿ ಎದುರಾಗಿದೆ. ಅನ್ನದಾತನ ಸಂಕಷ್ಟ ಮುಗಿಲು ಮುಟ್ಟಿದೆ. ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿದೆ. ಈ ಸಂಬಂಧ ಬರ ಸಮೀಕ್ಷೆಗಾಗಿ ನಾಳೆ ರಾಜ್ಯಕ್ಕೆ ಕೇಂದ್ರ ಸರ್ಕಾರದ ಮೂರು ತಂಡ ಭೇಟಿ ನೀಡಲಿದ್ದು ಅಗಸ್ಟ್ 9 ರವರೆಗೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಚಿತ್ರದುರ್ಗ, ಹಾವೇರಿ, ಗದಗ, ಕೊಪ್ಪಳ, ವಿಜಯನಗರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ ಒಟ್ಟು 12 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಈಗಾಗಲೇ ರಾಜ್ಯದಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದ್ದು, ಈ ನಿಟ್ಟಿನಲ್ಲಿ ಕೇಂದ್ರದ ಬಳಿ 6 ಸಾವಿರ ಕೋಟಿ ರೂ. ಪರಿಹಾರವನ್ನು ಕೇಳಿ ಚರ್ಚಿಸಲಾಗಿತ್ತು.

ಮಾರ್ಗಸೂಚಿಗಳ ಪ್ರಕಾರ, ಮಧ್ಯಮ ಬರಕ್ಕೆ ಕೇಂದ್ರ ಸರ್ಕಾರ ಪರಿಹಾರ ಕೊಡಬಹುದು ಅಥವಾ ಇಲ್ಲದೇ ಇರಬಹುದು. ಬರ ಘೋಷಣೆ ಮನವಿಗೆ ಎಲ್ಲ ಸಿದ್ದತೆ ಮಾಡಿಕೊಂಡಿದ್ದೇವೆ. ಎಲ್ಲ ಬರ ಪೀಡಿತ ತಾಲೂಕುಗಳಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲು ಸೂಚನೆ ನೀಡಿದ್ದೇವೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಈ ಹಿಂದೆ ಹೇಳಿದ್ದರು. ಈ ಸಮೀಕ್ಷೆ ಪ್ರಕ್ರಿಯೆಯಲ್ಲಿ ರಾಜ್ಯದ ಕೃಷಿ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಯ ಪ್ರಕಾರ ನೀಡಿರುವ ಮಾಹಿತಿಯಂತೆ ಕೇಂದ್ರ ಸರ್ಕಾರ 6000 ಕೋಟಿ ರಾಜ್ಯಕ್ಕೆ ನೀಡಿದರೆ, ಬರ ಎದುರಾಗಿ ಬರಡು ಭೂಮಿಯಲ್ಲಿ ಆಕಾಶವನ್ನೇ ನೋಡುತ್ತಾ ಕುಳಿತಿರುವ ಅನ್ನದಾತನಿಗೆ ಸರ್ಕಾರದ ಸವಲತ್ತುಗಳು ಸಿಗಬಹುದು ಎನ್ನುವ ಭರವಸೆಯಲ್ಲಿ ದೇಶಕ್ಕೆ ಅನ್ನ ನೀಡುವ ಅನ್ನದಾತ ಕಾಯುತ್ತಾ ಕುಳಿತಿದ್ದಾನೆ.

(ವರದಿಗಾರ :ಎ ಚಿದಾನಂದ)

Related