ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರ

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರ

ಜೇವರ್ಗಿ : ಡಿ.27 ಭಾನುವಾರ ನಡೆಯಲಿರುವ ಗ್ರಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಸ್ಪಷ್ಟ ಬಹುಮತದಿಂದ ಆರಿಸಿ ತರಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶಾಸಕ ಡಾ. ಅಜಯ್ ಸಿಂಗ್ ಮನವಿ ಮಾಡಿದರು.

ಕರ್ನಾಟಕ ರಾಜ್ಯ ಚುನಾವಣಾ ಆಯೋಗದಿಂದ ನಿಗದಿಪಡಿಸಲಾಗಿರುವ ಗ್ರಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ಜೇವರ್ಗಿ ತಾಲೂಕಿನ ಯಡ್ರಾಮಿ, ಆರಳಗುಂಡಗಿ, ಇಜೇರಿ ಜಿ.ಪಂ ವ್ಯಾಪ್ತಿಯಲ್ಲಿ ಬರುವ ವಿವಿಧ ಹಳ್ಳಿಗಳಲ್ಲಿ ಗ್ರಾ.ಪಂ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ ಅವರು, ಗ್ರಾ.ಪಂ ಚುನಾವಣಾ ಅಖಾಡದಲ್ಲಿನ ಕಾಂಗ್ರೆಸ್ ಪರ ಅಭ್ಯರ್ಥಿಗಳ ಗೆಲುವು ಕಾರ್ಯಕರ್ತರ ಗೆಲುವಾಗಿ ಪರಿಣಮಿಸಲಿದೆ. ಪಕ್ಷಕ್ಕಾಗಿ ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಸ್ಪರ್ಧಿಸಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದರೆ ತಾಲೂಕಿನಾದ್ಯಂತ ಪಕ್ಷದ ಬಲವರ್ಧನೆಗೆ ಮುನ್ನಡೆ ಬರೆಯುತ್ತದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರ, ಜನಪರ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ ಪ್ರಸ್ತುತ ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಪಕ್ಷದ ಆಡಳಿತವು ರೈತ ವಿರೋಧಿಯಾಗಿದೆ ಎಂದರು.

ಕೇಂದ್ರ  ಸರ್ಕಾರವು ಜಾರಿಗೆ ತಂದಿರುವ ಕೃಷಿ ಹಾಗೂ ಎಪಿಎಂಸಿ ಕಾಯ್ದೆಗಳು ರೈತರ ಪಾಲಿಗೆ ಮರಣಶಾಸನವಾಗಿದೆ ಎಂದು ಶಾಸಕ ಡಾ. ಅಜಯಸಿಂಗ್ ಕಿಡಿಕಾರಿದರು.

 

Related