ಸರ್ಕಾರದ ವಿರುದ್ದ ಬಿಜೆಪಿ ಬೃಹತ್‌ ಪ್ರತಿಭಟನೆ

ಸರ್ಕಾರದ ವಿರುದ್ದ ಬಿಜೆಪಿ ಬೃಹತ್‌ ಪ್ರತಿಭಟನೆ

ಬೆಂಗಳೂರು,ಸೆ.23: ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ವಿಪಕ್ಷ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿದೆ. ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ , ಬಸವರಾಜ ಬೊಮ್ಮಾಯಿ, ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವರಾದ ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ, ಕೆ.ಗೋಪಾಲಯ್ಯ, ಗರುಡಾಚಾರ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಮಾತನಾಡಿ , ರಾಜ್ಯ ಸರ್ಕಾರದ ಪ್ರಮಾದದಿಂದಾಗಿ ಕರ್ನಾಟಕಕ್ಕೆ ಇಂದು ಗಂಡಾಂತರ ಎದುರಾಗಿದೆ. ರೈತರ ಹಿತವನ್ನು ಕಾಪಾಡುವ ಬದಲು ಕೇವಲ ಕುರ್ಚಿ ಉಳಿಸಲು ಕಾಲಹರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಕಾರಕ್ಕೆ ಬಂದಾಗಲೆಲ್ಲ ಕಾವೇರಿ ಸಮಸ್ಯೆ ಉಲ್ಬಣವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಸುಪ್ರೀಂಕೋರ್ಟ್ ಆದೇಶ ನೀಡುವ ಮೊದಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದ್ದು, ಅಕ್ಷಮ್ಯ ಅಪರಾಧ. ಜಲಾಶಯದ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ಎಡವಿದೆ. ಕಾವೇರಿ ಕೊಳ್ಳದ ರೈತರನ್ನು ನಿರ್ಲಕ್ಷ್ಯ ಮಾಡಿರುವ ಈ ಸರ್ಕಾರಕ್ಕೆ ಜನತೆಯೇ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ಕೊಟ್ಟರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕರಾಳ ಆಡಳಿತ ರಾಜ್ಯದಲ್ಲಿದೆ. ಸರ್ಕಾರ ಜನತೆಗೆ ನೀರು ಕೊಡಲು ಯೋಗ್ಯತೆ ಇಲ್ಲ. ಅಭಿವೃದ್ಧಿ ಸಂಪೂರ್ಣ ನಿಂತಿದೆ. ನೆಲ, ಜಲ ಹಿತ ಕಾಯಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾವೇರಿ ವಿಚಾರದಲ್ಲಿ ಆರಂಭದಿಂದಲೂ ಎಡವಿದೆ. ಬರುವ ದಿನಗಳಲ್ಲಿ ಕಾವೇರಿ ಕೊಳ್ಳದ ಜನರಿಗೆ ನೀರಿನ ಸಮಸ್ಯೆ ಎದುರಾದರೆ ಸಿದ್ದರಾಮಯ್ಯ ಸರ್ಕಾರವೇ ಕಾರಣ ಎಂದರು.

ಮೊದಲನೇ ಸಿಡಬ್ಲುಎಂಎ ಸಭೆಯಲ್ಲಿ ನಮ್ಮ ಅಕಾರಿಗಳು ಮಾತನಾಡಲಿಲ್ಲ. ಆಗ ಸುಪ್ರೀಂಕೋರ್ಟ್‍ಗೆ ಹೋಗಲಿಲ್ಲ. ಎರಡನೇ ಆದೇಶ ಬಂತು ಆಗ ಸರ್ವಪಕ್ಷ ಸಭೆ ಕರೆದರು. ಆಗ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಅರ್ಜಿ ಹಾಕುವಂತೆ ನಾವು ಹೇಳಿದ್ದೆವು. ಆದರೆ ಇವರು ಹಾಕದೆ ಇದ್ದದ್ದು ಈ ಸಮಸ್ಯೆಗೆ ಮೂಲ ಕಾರಣ ಎಂದು ಆಕ್ಷೇಪಿಸಿದರು.

 

Related