ಮೂರು ದಶಕದ ಇತಿಹಾಸ ತಳ್ಳಿಹಾಕಿದ ಬಿಜೆಪಿ

ಮೂರು ದಶಕದ  ಇತಿಹಾಸ ತಳ್ಳಿಹಾಕಿದ ಬಿಜೆಪಿ

ಗದಗ: 30 ವರ್ಷಗಳ ನಂತರ ರಾಜ್ಯ ಬೀಜ ನಿಗಮ ನಿಯಮಿತ ವಲಯ-04 ರ ನಿರ್ದೇಶಕರಾಗಿ ಜಿಲ್ಲೆಯ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವಬಸಪ್ಪ ಎಸ್. ಬೆಲ್ಲದ ಚುನಾವಣೆ ಮೂಲಕ ಆಯ್ಕೆ ಆಗಿದ್ದಾರೆ. ಆದ್ದರಿಂದ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಬಣ್ಣ ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು.

ರಾಜ್ಯ ಬೀಜ ನಿಗಮ ನಿಯಮಿತ ವಲಯ-4 ಇದು ಗದಗ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಹೀಗೆ 9 ಜಿಲ್ಲೆಗಳನ್ನೊಳಗೊಂಡ ಕ್ಷೇತ್ರವಾಗಿದೆ. ಆದ್ರೆ ಕಳೆದ 30 ವರ್ಷಗಳಿಂದ ರೋಣ ಕ್ಷೇತ್ರದ ಕಾಂಗ್ರೆಸ್‍ನ ಮಾಜಿ ಶಾಸಕ ಜಿ.ಎಸ್ ಪಾಟೀಲ್‍ರ ಸಹೋದರ ಐ.ಎಸ್.ಪಾಟೀಲ್ ಅವರು 6 ಬಾರಿ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಆದ್ರೆ ಈ ಬಾರಿ ಬಿಜೆಪಿ ಹಾಲಿ ಶಾಸಕ ಕಳಕಪ್ಪ ಬಂಡಿ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು, ಬಿಜೆಪಿ ಪರ ಅಭ್ಯರ್ಥಿ ಶಿವಬಸಪ್ಪ ಎಸ್ ಬೆಲ್ಲದರನ್ನು ಕಣಕ್ಕಿಳಿಸಲಾಯಿತು.

ಒಟ್ಟು 9 ಜಿಲ್ಲೆಯಲ್ಲಿ 2,444    ಷೇರುದಾರ ಮತದಾರರ ಪೈಕಿ 5,626 ಮತಗಳಿವೆ. ರೋಣದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಐ.ಎಸ್ ಪಾಟೀಲ್ 1,678 ಮತಗಳನ್ನು ತೆಗೆದುಕೊಂಡು ಪರಾಭವಗೊಂಡ್ರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವಬಸಪ್ಪ ಬೆಲ್ಲದ ಒಟ್ಟು 1,908 ಮತಗಳನ್ನು ಪಡೆದು 230 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ಹಾಲಿ ಶಾಸಕ ಕಳಕಪ್ಪ ಬಂಡಿ ಹಾಗೂ ಮಾಜಿ ಶಾಸಕ ಜಿ.ಎಸ್ ಪಾಟೀಲ್ ಇಬ್ಬರ ಪ್ರತಿಷ್ಠೆಯ ಕಣವಾಗಿ ಹೊರಹೊಮ್ಮಿತ್ತು. ಇದೇ ಕಳೆದ ದಿನಾಂಕ 06 ರಂದು ಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟವಾಗಿದೆ. ರಾಜ್ಯ ಬೀಜ ನಿಗಮ ನಿಯಮಿತ ವಲಯ -4 ರಲ್ಲೂ ಕಮಲ ಅರಳಿದೆ. ಇದರಿಂದ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿದೆ

Related