ಬಿಜೆಪಿಯವರು ಹೆಣದ ಮೇಲೆ ಹಣ ಮಾಡಿದರು ಡಿ.ಕೆ.ಶಿ

ಬಿಜೆಪಿಯವರು ಹೆಣದ ಮೇಲೆ ಹಣ ಮಾಡಿದರು ಡಿ.ಕೆ.ಶಿ

ಬೆಂಗಳೂರು: ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಇದನ್ನು ಸಹಿಸಲಾಗದೆ ಬಿಜೆಪಿಯವರು ನಮ್ಮ ಸರ್ಕಾರದ ಮೇಲೆ ಸುಳ್ಳು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಅವರ ಆರೋಪ ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಬೇರೆಯವರಿಗೆ ಹೆದರಿಸಿದಂತೆ ನನಗೆ ಹೆದರಿಸಲು ಸಾಧ್ಯವಿಲ್ಲ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ. ನಾನು ಎಂದಿಗೂ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ತರುವ, ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳನ್ನು ಬಯಲು ಮಾಡುತ್ತೇನೆ. ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುಡುಗಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆ ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಚುನಾವಣೆ ಫಲಿತಾಂಶವನ್ನು ಅರಗಿಸಿಕೊಳ್ಳಲು ವಿರೋಧ ಪಕ್ಷದವರಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಆಗುತ್ತಿಲ್ಲ. ಆದರೂ ಸರ್ಕಾರದ ವಿರುದ್ಧ ಅನಗತ್ಯ ಟೀಕೆ ಮಾಡುತ್ತಲೇ ಇದ್ದಾರೆ. ಮೊದಲು ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ಮಾಡಿದರು. ನಾವು ಐದು ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಯೋಜನೆ ಜಾರಿ ಮಾಡಿ ಕೆಲಸದ ಮೂಲಕ ಅವರ ಟೀಕೆಗೆ ಉತ್ತರ ನೀಡಿದ್ದೇವೆ.

ಅದಕ್ಕೆ ಈಗ ಅವರು ಚೆಲುವರಾಯಸ್ವಾಮಿ ಹಾಗೂ ನನ್ನ ವಿರುದ್ಧ ಕಮಿಷನ್ ವಿಚಾರವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರ ಅವಧಿಯಲ್ಲಿ ಒಂದು ಕ್ಷೇತ್ರದಲ್ಲಿ, ಕೆಲಸ ಮಾಡದೇ 117 ಕೋಟಿ ಬಿಲ್ ಪಾವತಿ ಮಾಡಲಾಗಿದೆ ಎಂದು ಲೋಕಾಯುಕ್ತ ಸಂಸ್ಥೆ ವರದಿ ಮಾಡಿದೆ. ಈ ಬಗ್ಗೆ ಕಾನೂನು ಮೂಲಕ ತನಿಖೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿಗಳು ಸದನದಲ್ಲಿ ಭರವಸೆ ನೀಡಿದ್ದರು. ಅದರಂತೆ ನಾವು ತನಿಖಾ ಸಮಿತಿ ಮಾಡಿ ತನಿಖೆಗೆ ಆದೇಶ ನೀಡಿದ್ದೇವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ನಮಗೆ ನೈಜ್ಯತೆ ನೋಡಿ ಬಿಲ್ ಪಾವತಿ ಮಾಡಿ ಎಂದು ಹೇಳಿದ್ದಾರೆ. ಅದಕ್ಕೆ ನಾವು ತನಿಖೆ ಆರಂಭಿಸಿದ್ದೇವೆ. ಈ ತನಿಖೆ ಆರಂಭಿಸಿದ ತಕ್ಷಣ ನಮ್ಮ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ.

ಪಕ್ಷಕ್ಕಾಗಲಿ, ಸರ್ಕಾರಕ್ಕಾಗಲಿ, ಮುಜುಗರ ಮಾಡುವ, ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ನಾನು ಹಾಗೆ ಮಾಡಿದ್ದರೆ, ಸೋನಿಯಾ ಗಾಂಧಿ ಅವರು ಜೈಲಿಗೆ ಬಂದು ನನಗೆ ಧೈರ್ಯ ತುಂಬುತ್ತಿದ್ದರಾ? ಆಗ ನಾನು ಕೇವಲ ಶಾಸಕ ಹಾಗೂ ಕಾರ್ಯಕರ್ತ ಮಾತ್ರ. ಆ ತಾಯಿ ನನಗೆ ಶಕ್ತಿ ತುಂಬಿದ್ದಾರೆ.

ಬಿಜೆಪಿ ಅಕ್ರಮದ ಬಗ್ಗೆ ಮಾಧ್ಯಮಗೋಷ್ಠಿ ನಡೆಸುವಂತೆ ಮುಖ್ಯಮಂತ್ರಿಗಳು ಹೇಳಿದರು. ಮುಂದಿನ ದಿನಗಳಲ್ಲಿ ಅದನ್ನು ಮಾಡುತ್ತೇನೆ. ಬಿಜೆಪಿ ನಾಯಕರು ಮಾಡಿರುವ ಕಳ್ಳತನ, ರಾಜ್ಯದ ಹಣ ಲೂಟಿಯನ್ನು ಬಯಲು ಮಾಡುವುದು ನಮ್ಮ ಮೊದಲ ಕರ್ತವ್ಯ. ಅವರು ಹೆಣದ ಮೇಲೆ ಹಣ ಮಾಡಿದರು, ಕೋವಿಡ್ ಸಮಯದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದರು. ಎಲ್ಲವನ್ನು ಪತ್ತೆಹಚ್ಚಬೇಕು.

ಚೆಲುವರಾಯಸ್ವಾಮಿ ಮೇಲೆ ರಾಜ್ಯಪಾಲರಿಗೆ ನಕಲಿ ಪತ್ರ ಬರೆದಿದ್ದಾರೆ. ಈ ಬಗ್ಗೆ ಕೇವಲ ಸಿ.ಟಿ ರವಿ, ಗೋಪಾಲಯ್ಯ, ಅಶ್ವತ್ಥ್ ನಾರಾಯಣ, ಅಶೋಕ್ ಸೇರಿದಂತೆ ಒಂದು ಗುಂಪು ಮಾತ್ರ ಟೀಕೆ ಮಾಡುತ್ತಾರೆ. ಬಿಜೆಪಿ ನಾಯಕರು ನಮಗೆ ಅಧಿಕಾರ ಸಿಕ್ಕರೂ ಗ್ಯಾರಂಟಿ ಯೋಜನೆಗಂಳಂತಹ ಯೋಜನೆ ನೀಡಲಿಲ್ಲವಲ್ಲ ಎಂದು ಅಸೂಯೆಯಿಂದ ಕೈ ಹೊಸಕಿಕೊಳ್ಳುತ್ತಿದ್ದಾರೆ. ಜನ ನಮ್ಮ ಯೋಜನೆಯಿಂದ ಸಂತೋಷ ಪಡುತ್ತಿದ್ದಾರೆ. ನಮ್ಮ ಯೋಜನೆಗಳು ಜನರ ಮನಸ್ಸು ಗೆದ್ದಿವೆ. ಶಕ್ತಿ ಯೋಜನೆಯಿಂದ ಧರ್ಮಸ್ಥಳಕ್ಕೆ ಹೆಚ್ಚಿನ ಮಹಿಳೆಯರು ತೆರಳಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ ಎಂದು ವೀರೇಂದ್ರ ಹೆಗಡೆ ಅವರು ಕೂಡ ಸರ್ಕಾರಕ್ಕೆ ಅಭಿನಂದಿಸಿ ಪತ್ರ ಬರೆದಿದ್ದಾರೆ.

ನಮ್ಮ ಮುಂದಿನ ಗುರಿ ಕೇವಲ 2024 ಮಾತ್ರವಲ್ಲ 2028 ಕೂಡ ನಮ್ಮ ಗುರಿಯಾಗಿದೆ. ಇದಕ್ಕೆ ನಿಮ್ಮ ಸಹಕಾರ ಮುಖ್ಯ. ನೀವೆಲ್ಲರೂ ತಾಳ್ಮೆಯಿಂದ ಇರಿ. ಮುಂದಿನ ದಿನಗಳಲ್ಲಿ ಕೆಪಿಸಿಸಿಯಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಕೆಲವು ಮಂತ್ರಿಗಳನ್ನು ಬದಲಾಯಿಸಬೇಕಾಗುತ್ತದೆ. ಪಕ್ಷಕ್ಕೆ ಕೊಡುಗೆ ನೀಡದವರನ್ನು ಬದಲಾವಣೆ ಮಾಡಲೇಬೇಕಾಗುತ್ತದೆ. ಬ್ಲಾಕ್ ನಿಂದ ಜಿಲ್ಲಾ ಹಾಗೂ ಕೆಪಿಸಿಸಿ ಮಟ್ಟದವರೆಗೂ ಬದಲಾವಣೆ ಮಾಡಲಾಗುವುದು ಎಂದರು.

 

Related