ದೆಹಲಿ: ಬಿಜೆಪಿ ಸರ್ಕಾರ ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (ಪಿಎಸ್ ಯು) 30 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಭರ್ತಿಯಾಗದೆ ಉಳಿದಿರುವುದು ದೇಶದ ಅತಿದೊಡ್ಡ ದುರಂತ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ಕಾರ್ಮಿಕರಿಗೆ ಮಾಡಿದ ದ್ರೋಹವು ದೇಶಾದ್ಯಂತ ಕಾರ್ಮಿಕ ದಂಗೆಯನ್ನು ಹುಟ್ಟುಹಾಕಿದೆ; ಕಾರ್ಮಿಕ ಸಂಘಗಳು ಹಲವಾರು ಆರೋಪಗಳನ್ನು ಕೇಂದ್ರ ಸರ್ಕಾರದ ವಿರುದ್ಧ ಮಾಡುತ್ತಿವೆ.
ಸಶಸ್ತ್ರ ಪಡೆಗಳಲ್ಲಿ ಸುಮಾರು 1.55 ಲಕ್ಷ ಹುದ್ದೆಗಳಿವೆ. ರೈಲ್ವೆ ಇಲಾಖೆಯಲ್ಲಿ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಸಿಆರ್ಪಿಎಫ್, ಬಿಎಸ್ಎಫ್ ಮತ್ತು ಐಟಿಬಿಪಿ ಸೇರಿದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) 85,000 ಕ್ಕೂ ಹೆಚ್ಚು ಖಾಲಿ ಹುದ್ದೆಗಳಿವೆ. ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಸಾರ್ವಜನಿಕ ಸೇವಾ ಸಿಬ್ಬಂದಿಯ ತುರ್ತು ಅಗತ್ಯದ ಹೊರತಾಗಿಯೂ, ಭಾರತ ಸರ್ಕಾರ ಈ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ಮೀನಮೇಷ ಎಣಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಭಾರತದಲ್ಲಿ ನಿರುದ್ಯೋಗವು ಆತಂಕಕಾರಿ ಮಟ್ಟವನ್ನು ತಲುಪಿದೆ, ದೇಶದಲ್ಲಿ ನಿರುದ್ಯೋಗ ಬೆಳವಣಿಗೆ ದರ 7.5% ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ತಿಳಿಸಿದೆ. ಇದು 45 ವರ್ಷಗಳಲ್ಲಿಯೇ ದಾಖಲಾದ ಅತಿ ಹೆಚ್ಚು ನಿರುದ್ಯೋಗ ದರವಾಗಿದೆ. ಈ ಬಿಕ್ಕಟ್ಟಿನ ಹೊರತಾಗಿಯೂ, ಸರ್ಕಾರವು ಪರಿಣಾಮಕಾರಿ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಸರ್ಕಾರದ ನಿಷ್ಕ್ರಿಯತೆಯ ಬಗ್ಗೆ ಪ್ರಧಾನಿ ಮೋದಿಯವರ ಗಮನ ಸೆಳೆಯಲು ಕಾರ್ಮಿಕ ಸಂಘಗಳು ಪ್ರತಿಭಟನೆ ನಡೆಸುತ್ತಿವೆ. ಇದನ್ನೂ ಓದಿ: ಬಿಜೆಪಿ ಎಜೆಂಟ್ ಆಗಿ ಕೆಲಸ ಮಾಡಬೇಡಿ, ಕಾವಿ ಕಳಚಿ ರಾಜಕೀಯಕ್ಕೆ ಬನ್ನಿ
ಬಡವರು ಬಡವರಾಗಿಯೇ ಇದ್ದಾರೆ, ಶ್ರೀಮಂತರು ಶ್ರೀಮಂತರಾಗಿಯೇ ಬೆಳೆಯುತ್ತಿದ್ದಾರೆ. ಭಾರತದಲ್ಲಿ ಸಂಪತ್ತಿನ ಅಸಮಾನತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತಿದೆ. ವರದಿಗಳ ಪ್ರಕಾರ, ಭಾರತೀಯರಲ್ಲಿ ಅಗ್ರ 10% ಜನರು ದೇಶದ ಒಟ್ಟು ಸಂಪತ್ತಿನ 77% ಪಾಲನ್ನು ಅನ್ನು ಹೊಂದಿದ್ದಾರೆ; ಆದರೆ ಕೆಳಗಿನ 15% ಜನರು ಕೇವಲ 13% ಅನ್ನು ಹೊಂದಿದ್ದಾರೆ.
ದೇಶದ ತಲಾ ಆದಾಯ ಜಿಡಿಪಿ (GDP) ಮಟ್ಟದ ಪ್ರಕಾರ ವಿಶ್ವದ 50 ನೇ ಬಡ ರಾಷ್ಟ್ರವಾಗಿದೆ, ಬಾಂಗ್ಲಾದೇಶ, ಕಾಂಬೋಡಿಯಾ, ಕೀನ್ಯಾ ಮತ್ತು ಹೈಟಿಯಂತಹ ದೇಶಗಳಿಗಿಂತ ಸರಾಸರಿ $2,900 (ಸುಮಾರು ₹2.42 ಲಕ್ಷ) ಕಡಿಮೆಯಾಗಿದೆ. ಜಾಗತಿಕ ಸರಾಸರಿ ತಲಾ ಆದಾಯವು ಸುಮಾರು $13,000 (ಸುಮಾರು ₹10.85 ಲಕ್ಷ), ಈ ಅಂಕಿಅಂಶಗಳನ್ನು ನೋಡಿದರೆ ಪ್ರಸ್ತುತ ಸರ್ಕಾರದ ಆಡಳಿತದಲ್ಲಿ ಭಾರತ ಎಷ್ಟು ಹಿಂದುಳಿದಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದರು.
