ಗಣಿ ಮುಖಂಡರ ಮುಸುಕಿನ ಗುದ್ದಾಟಕ್ಕೆ ಕೊನೆ ಯಾವಾಗ..?

ಗಣಿ ಮುಖಂಡರ ಮುಸುಕಿನ ಗುದ್ದಾಟಕ್ಕೆ ಕೊನೆ ಯಾವಾಗ..?

ಹಟ್ಟಿ ಚಿನ್ನದ ಗಣಿ : ಗಂಡ-ಹೆಂಡತಿ ಜಗಳದ ಮಧ್ಯೆ ಕೂಸು ಬಡವಾಯಿತು ಎನ್ನುವಂತೆ ಇಡೀ ದೇಶಕ್ಕೇ ಚಿನ್ನ ನೀಡುತ್ತಿರುವ ಪ್ರತಿಷ್ಠಿತ ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯ ಮಧ್ಯದ ಹೊಂದಾಣಿಕೆ ಕೊರತೆ, ಮುಸುಕಿನ ಗುದ್ದಾಟದಲ್ಲಿ ಬಡಪಾಯಿ ಕಾರ್ಮಿಕರು ಮಾತ್ರ ಬಡವಾಗುತ್ತಿರುವುದು ಸುಳ್ಳಲ್ಲ. ಏತನ್ಮಧ್ಯೆ ಇವರುಗಳ ಮಧ್ಯದ ಬಿರುಕು ಚಿನ್ನದ ಗಣಿಯ ಆಡಳಿತ ಮಂಡಳಿಗೂ ತಲೆನೋವಾಗಿ ಪರಿಣಮಿಸಿದ್ದು ಮಾತ್ರ ಗುಟ್ಟಾಗಿ ಉಳಿದಿಲ್ಲ.

‘ಎ’ ಟೀಮ್ ‘ಬಿ’ ಟೀಮ್
ಒಂದು ಕುಟುಂಬ ನೆಮ್ಮದಿಯಾಗಿ ಇರಬೇಕಾದರೆ ಹಿರಿಯರ ಮಾರ್ಗದರ್ಶನ, ಹೊಂದಾಣಿಕೆ ಸ್ವಭಾವ ಅಗತ್ಯವಾಗಿರುವ ಕಾಲದಲ್ಲಿ, ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿರುವ ದೊಡ್ಡ ಕಂಪನಿಯಲ್ಲಿ ಕಾರ್ಮಿಕರ ಪ್ರತಿನಿಧಿಗಳಾದವರ ಮಧ್ಯ ಹೊಂದಾಣಿಕೆ ಕೊರತೆಯಾದರೆ ಹೇಗೆ ತಾನೇ ಬಡಪಾಯಿಗಳು ಸಂಭಾಳಿಸಿಕೊಳ್ಳಲು ಸಾಧ್ಯ.? ಎನ್ನುವ ಪ್ರಶ್ನೆಗಳೀಗ ಕಾರ್ಮಿಕರಲ್ಲಿ ಮನೆ ಮಾಡಿವೆ.

ಸಂಘಟನೆಯ ಪ್ರಧಾನಕಾರ್ಯದರ್ಶಿ ಅಮೀರಲಿಯವರದ್ದು ಎ ಟೀಮ್ ಎಂದು ಗುರುತಿಸಿಕೊಂಡಿದ್ದರೆ, ಅದ್ಯಕ್ಷ ವಾಲಿಬಾಬು ಅವರದ್ದು ಬಿ ಟೀಮ್ ಎಂದು ಸಧ್ಯಕ್ಕೆ ಇಬ್ಬಾಗವಾಗಿ ಗುರುತಿಸಿಕೊಂಡಿವೆ. 2017ರಲ್ಲಿ ಕಾರ್ಮಿಕ ಸಂಘಟನೆಯ ಚುನಾವಣೆ ನಡೆದ ಕೆಲ ದಿನಗಳ ಬಳಿಕ ಇಬ್ಬರೂ ಮುಖಂಡರ ಮಧ್ಯದ ಮುಸುಕಿನ ಗುದ್ದಾಟ ಆರಂಭವಾಯಿತು. ಕ್ರಮೇಣ ದಿನಗಳು ಉರುಳಿದಂತೆ ಗುದ್ದಾಟ ತಾರಕಕ್ಕೇರಿ, ಬರುವ ಕೆಲವೇ ದಿನಗಳಲ್ಲಿ ಚುನಾವಣೆ ಇದ್ದಾಗ್ಯೂ ಎಚ್ಚೆತ್ತುಕೊಳ್ಳದ ಲೀಡರ್‍ಗಳು ತಮ್ಮ ಸ್ವ ಪ್ರತಿಷ್ಠೆಗಾಗಿ ಕಾರ್ಮಿಕ ಸಂಘಟನೆಯನ್ನೇ ಬಲಿಕೊಡುತ್ತಿರುವ ಪ್ರಸಂಗ ಜರುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಕಾರ್ಮಿಕರ 2016ನೇ ಸಾಲಿನ ವೇತನ ಒಪ್ಪಂದಕ್ಕೆ ಸಂಬಂಧಿಸಿ ಪ್ರಾದೇಶಿಕ ಕಾರ್ಮಿಕ ಆಯುಕ್ತರು ಬಳ್ಳಾರಿ ಇವರು ನಿಗದಿಪಡಿಸುವ ದಿನಾಂಕದಂದು ಸಹಿ ಮಾಡಲಾಗುವುದು. ಕೆಲ ಬೇಡಿಕೆ ಬಾಕಿ ಇದ್ದು ನಿರ್ದೇಶಕರ ಮಂಡಳಿ ಸಭೆಯಲ್ಲಿ ಮಂಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಸಭೆಯ ತೀರ್ಮಾನಕ್ಕೆ ಇಬ್ಬರೂ ಬದ್ಧವಾಗಿ ಇರಬೇಕಾಗುತ್ತದೆಂದು ವ್ಯವಸ್ಥಾಪಕ ನಿರ್ದೇಶಕಿ ಅವರು ಪತ್ರ ಬರೆಯುವ ಮೂಲಕ ಸಂಘಕ್ಕೆ ತಿಳಿಸಿರುತ್ತಾರೆ ಎಂದು ಟಿ.ಯು.ಸಿ.ಐ. ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಎ ಟೀಮ್‍ನ ಮುಖಂಡ ಪ್ರಧಾನ ಕಾರ್ಯದರ್ಶಿಯಾದ ಮಹ್ಮದ್ ಅಮೀರಅಲಿ ಅವರು ಕಾರ್ಮಿಕ ವರ್ಗಕ್ಕೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಣಿ ಕಂಪನಿ ಕಾರ್ಮಿಕರ ಹೊಸ ವೇತನ ಒಪ್ಪಂದಕ್ಕೆ ಸಹಿ ಹಾಕುವ ಬಗ್ಗೆ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಟಿಸಿದ್ದು ಏಕಪಕ್ಷೀಯವಾಗಿದೆ. ಟಿ.ಯು.ಸಿ.ಐ. ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಬಿ ಟೀಮ್‍ನ ಅಧ್ಯಕ್ಷ ವಾಲೇಬಾಬು, ಸಂಘದ ಕಾರ್ಯಕಾರಿ ಸಮಿತಿ ಸಭೆ ಕರೆದು ಚರ್ಚೆ ನಡೆಸಿದ ನಂತರ ಸಹಿ ಹಾಕುವ ಅಥವಾ ಬಿಡುವ ಬಗ್ಗೆ ತೀರ್ಮಾನಕ್ಕೆ ಬರಬೇಕಾಗುತ್ತದೆಂದು ಪ್ರಧಾನ ಕಾರ್ಯದರ್ಶಿ ಮಹ್ಮದ ಅಮೀರಅಲಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಕೂಡಲೆ ಕಾರ್ಯಕಾರಿ ಸಮಿತಿ ಸಭೆ ಕರೆದು ಎಲ್ಲಾ ಪದಾಧಿಕಾರಿಗಳಿಗೆ ತಾವುಗಳು ಆಡಳಿತ ವರ್ಗಕ್ಕೆ ಬರೆದ ಪತ್ರಗಳ ಬಗ್ಗೆ ಹಾಗೂ ಮೇ 11 ರಂದು ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಕಾರ್ಮಿಕ ಆಯುಕ್ತರ ಬಳಿಯಲ್ಲಿ ನಡೆಸಿದ ಚರ್ಚೆ ಹಾಗೂ ತೆಗೆದುಕೊಂಡ ನಿರ್ಣಯದ ಬಗ್ಗೆ ತಿಳಿಸಿದ ನಂತರ ವೇತನ ಒಪ್ಪಂದಕ್ಕೆ ಸಹಿ ಹಾಕುವ ಬಗ್ಗೆ ತೀರ್ಮಾನಕ್ಕೆ ಬರೋಣ. ಅಡುಗೆ ಅನಿಲ, ಟಿವಿ ಕೇಬಲ್ ಹಾಗೂ ದಿನ ನಿತ್ಯದ ಭತ್ಯೆಗಳ ಸೌಲಭ್ಯಗಳನ್ನು ಹಿಂದಿನಂತೆ ಮುಂದುವರಿಸಲು ಕಂಪನಿ ನಿರ್ದೇಶಕ ಮಂಡಳಿ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ ಅದರ ಬಗ್ಗೆ ಸ್ಪಷ್ಟತೆ ಇಲ್ಲ.

ಈ ಸೌಲಭ್ಯಗಳ ಜತೆಯಲ್ಲಿ ಮೆಡಿಕಲ್ ಅನ್‍ಫಿಟ್ ಹಾಗೂ ವೇಟೇಜ್ ಇಂಕ್ರಿಮೆಂಟ್ ಬಗ್ಗೆ ಯಾವ ಸ್ಪಷ್ಟನೆ ಕೊಟ್ಟಿಲ್ಲ. ಕಂಪನಿ ನಿರ್ದೇಶಕ ಮಂಡಳಿ ಸಭೆಯಲ್ಲಿ ಇವುಗಳನ್ನು ಮಂಡಿಸಿ ಈ ಹಿಂದಿನಂತೆ ಜಾರಿಗೆ ತರಬೇಕಾಗಿದೆ. ಕಾರ್ಮಿಕ ಸಂಘದ ಕಾರ್ಯಕಾರಿ ಸಮಿತಿ ಸಭೆ ಕರೆಯುವಂತೆ ಹಲವು ಸಾರಿ ತಿಳಿಸಿದರು ಸಭೆ ಕರೆದಿರುವುದಿಲ್ಲ. 2018 ನವ್ಹೆಂಬರ್ 25 ರಂದು ಕರೆದ ಕೊನೆಯ ಸಭೆಯಾಗಿದೆ. ಕಾರ್ಯಕಾರಿ ಸಮಿತಿ ಸಭೆ ಕರೆಯದಿದ್ದರೆ ವೇತನ ಒಪ್ಪಂದಕೆ ಹೋಗುತ್ತೇವೆ. ನಂತರ ಸಹಿ ಮಾಡಬೇಕು ಅಥವಾ ಮಾಡುಬಾರದು ಎಂದು ಇನ್ನು ಸ್ಟಡಿ ಮಾಡುವ ಮೂಲಕ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಬಿ ಟೀಮ್ ಅಧ್ಯಕ್ಷ ವಾಲೇಬಾಬು ತಿಳಿಸಿದ್ದಾರೆ.

ಎರಡೂ ಗುಂಪಿನ ಮುಖಂಡರುಗಳು ತಮ್ಮ ಸ್ವಪ್ರತಿಷ್ಠೆಯನ್ನು ಬದಿಗಿಟ್ಟು, ಒಗ್ಗಟ್ಟಾಗಿ ಕಾರ್ಮಿಕರ ಏಳ್ಗೆಯ ಬಗ್ಗೆ ಶ್ರಮಿಸಬೇಕಿದೆ. ಇಲ್ಲವಾದಲ್ಲಿ ಬರುವ ಕೆಲವೇ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಕಾರ್ಮಿಕರು ಇವರಿಗೆ ತಕ್ಕ ಪಾಠ ಕಲಿಸುವಲ್ಲಿ ಎರಡು ಮಾತಿಲ್ಲ. ಇದೇರೀತಿ ತಮ್ಮ ಸ್ವಹಿತಾಸಕ್ತಿಗಾಗಿ ಸಂಘದ ಹಿತವನ್ನು ಬಲಿ ಕೊಡುತ್ತಿದ್ದರೆ, ಚುನಾವಣೆಯಲ್ಲಿ ಮಾತ್ರ ಇದರ ಲಾಭ ಮೂರನೇಯವರು ಪಡೆಯದೇ ಇರರು. ಈ ನಿಟ್ಟಿನಲ್ಲಿ ಹಿರಿಯ ಮುಖಂಡರುಗಳು ಎಚ್ಚೆತ್ತುಕೊಂಡು ಒಂದಾಗಿ ಚಿನ್ನದ ಗಣಿ ಕಾರ್ಮಿಕರ ಹಿತ ಕಾಯುವತ್ತ ಮತ್ತು ಕಾರ್ಮಿಕರ ಗೋಳಾಟಕ್ಕೆ ಕೊನೆ ಹಾಡಲು ಮುಂದಾಗಬೇಕಿದೆ.

Related