ದಸರಾ ಮೇಲೆ ಉಗ್ರರ ಕರಿ ನೆರಳು ಬೀಳದಂತೆ ಕಟ್ಟೆಚ್ಚರ

  • In State
  • October 24, 2023
  • 107 Views
ದಸರಾ ಮೇಲೆ ಉಗ್ರರ ಕರಿ ನೆರಳು ಬೀಳದಂತೆ ಕಟ್ಟೆಚ್ಚರ

ಮೈಸೂರು: ನಾಡ ದೇವತೆ ಉತ್ಸವಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಇದ್ದು, ಜಂಬೂ ಸವಾರಿಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ನಗರದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

ಜಂಬೂಸವಾರಿ ಮೆರವಣಿಗೆಯ ರಸ್ತೆಯಲ್ಲಿ ಪೊಲೀಸ್ ಹೈ ಅಲರ್ಟ್ ಆಗಿದ್ದು ಎಲ್ಲ ರೀತಿಯ ಬಿಗಿ ಭದ್ರತೆಯ ಕ್ರಮವನ್ನು ಜರುಗಿಸಿದ್ದಾರೆ.

ಹೌದು, ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದೆ. ಮೈಸೂರಿನ ಅರಮನೆ ಆವರಣದಲ್ಲಿ ಜಂಬೂ ಸವಾರಿಗೆ ಸಕಲ ಸಿದ್ಧತೆಗಳು ನಡೆದಿವೆ. ಜಂಬೂಸವಾರಿ ವೀಕ್ಷಿಸಲು ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಮೈಸೂರಿಗೆ ಆಗಮಿಸಿದ್ದಾರೆ. ಜಂಬೂಸವಾರಿ ಮೆರವಣಿಗೆ ಸಾಗುವ ರಸ್ತೆ ಇಕ್ಕೆಲಗಳಲ್ಲಿ ಲಕ್ಷಾಂತರ ಮಂದಿ ಜಮಾವಣೆಗೊಳ್ಳಲಿರುವ ಹಿನ್ನೆಲೆಯಲ್ಲಿ ಚಾಮರಾಜೇಂದ್ರ ವೃತ್ತ ಸೇರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಭದ್ರತೆ ಪರಿಶೀಲನೆ ಮಾಡಲಾಗಿದೆ.

ಮೈಸೂರು ಬೆಂಗಳೂರು ಉಗ್ರರ ಹಿಟ್ ಲಿಸ್ಟ್ ನಲ್ಲಿರುವ ವಿಚಾರ ಸಂಬಂಧ ಕೇಂದ್ರ ಗೃಹ ಇಲಾಖೆ ರಾಜ್ಯಕ್ಕೆ ಸೂಚನೆ ಕೊಟ್ಟ ಬೆನ್ನಲೆ ಖಾಕಿ ಹೈ ಅಲರ್ಟ್ ಆಗಿದೆ. ದಸರಾ ಮೇಲೆ ಉಗ್ರರ ಕರಿ ನೆರಳು ಬೀಳದಂತೆ ಕಟ್ಟೆಚ್ಚರ ವಹಿಸಲಾಗಿದೆ. ಬಾಂಬ್ ಸ್ಕ್ವಾಡ್ ಹಾಗೂ ಶ್ವಾನದಳದಿಂದ ತಪಾಸಣಾ ಕಾರ್ಯ ನಡೆದಿದೆ. ಅರಮನೆಯ ಇಂಚಿಂಚೂ ಬಿಡದಂತೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 47 ಟ್ಯಾಬ್ಲೊಗಳನ್ನ ಶ್ವಾನದಳ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ.

ಜನರು ರಸ್ತೆಗೆ ಇಳಿಯದಂತೆ ತಡೆ ಬೇಲಿ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಅರಮನೆ ಎದುರು ವಿಶಾಲವಾದ ಶಾಮಿಯಾನ ಕುರ್ಚಿಗಳನ್ನು ಹಾಕಲಾಗಿದ್ದು, ಜಂಬೂಸವಾರಿ ವೀಕ್ಷಿಸಲು 25 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜಂಬೂಸವಾರಿ ಮೆರವಣಿಗೆ ಹಿನ್ನೆಲೆ ಪೊಲೀಸ್‌ ಬಿಗಿ ಬಂದೋಬಸ್ತ್‌ ನಿಯೋಜನೆ ಮಾಡಲಾಗಿದೆ. ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ದಸರಾ ಮೆರವಣಿಗೆ ಸಾಗಲಿದ್ದು, ಜಂಬೂಸವಾರಿ ಭದ್ರತೆಗೆ 6 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಮೈಸೂರಿಗೆ ಆಗಮಿಸಿರುವ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ.

 

Related