ವಿದ್ಯಾರ್ಥಿಗಳಲ್ಲಿ ಮೂಡಿದ ಲವಲವಿಕೆ

ವಿದ್ಯಾರ್ಥಿಗಳಲ್ಲಿ ಮೂಡಿದ ಲವಲವಿಕೆ

ಕಲಬುರ್ಗಿ :  ಜಿಲ್ಲೆಯ ಹಲವು ಶಾಲೆ-ಕಾಲೇಜುಗಳಲ್ಲಿ ಶುಕ್ರವಾರ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತಿಯ ಪಿಯು ತರಗತಿಗಳು ಆರಂಭವಾದವು. ಕಳೆದ ಎಂಟು  ತಿಂಗಳಿಂದ  ಮೌನ ಹೊದ್ದು ಮಲಗಿದ್ದ ತರಗತಿಗಳಲ್ಲಿ ಈಗ ಲವಲವಿಕೆ ಕಂಡುಬರುತ್ತಿದೆ.
ನಗರದ ಬಹುಪಾಲು ಶಾಲೆ- ಕಾಲೇಜುಗಳಲ್ಲಿ ಶೇ 60ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾದರು. ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಹಾಜರಾತಿ ಕಡಿಮೆ ಕಂಡು ಬಂದಿದೆ.

ಬೆಳಿಗ್ಗೆ 10ರ ಸುಮಾರಿಗೆ ಹಲವು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಶಾಲೆಗಳತ್ತ ಹೆಜ್ಜೆ ಹಾಕಿದರು. ಪ್ರಾಂಶುಪಾಲರು, ಶಿಕ್ಷಕರು, ಉಪನ್ಯಾಸಕರು ಎದುರುಗೊಂಡು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.

ಕೈಗೆ ಸ್ಯಾನಿಟೈಸರ್ ಹಾಕಿ, ಥರ್ಮಲ್ ಸ್ಕ್ರೀನಿಂಗ್ ನಡೆಸಿದ ನಂತರ ತರಗತಿಗಳ ಒಳಗೆ ಬಿಡಲಾಯಿತು. ಒಂದು ಡೆಸ್ಕ್ನಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಿ, ಅಂತರ ಕಾಯ್ದುಕೊಳ್ಳಲಾಯಿತು.

ಶಿಕ್ಷಕಿಯರೇ ತರಗತಿಗಳ ಮುಂದೆ ಬಣ್ಣದ ರಂಗೋಲಿ ಹಾಕಿ ವಿದ್ಯಾರ್ಥಿನಿಯರನ್ನು ಸ್ವಾಗತಿಸಿದರು. ಹಲವು ಪಾಲಕರು ಸಹ ವಿದ್ಯಾರ್ಥಿನಿಯರನ್ನು ಕರೆತಂದು ಶಾಲೆಗಳ ಮುಂದೆ ಬಿಟ್ಟು ಹೋಗುತ್ತಿರುವುದು ಸಾಮಾನ್ಯವಾಗಿ  ಕಂಡುಬಂತು. ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ತರಗತಿಗಳು ಬೆಳಿಗ್ಗೆ 10.30ರಿಂದಲೇ ಮೊದಲ ತರಗತಿಗಳು ಆರಂಭವಾದವು. ಕನ್ಯಾ ಪ್ರೌಢಶಾಲೆಯಲ್ಲಿ 8 ಹಾಗೂ 9ನೇ ತರಗತಿ ವಿದ್ಯಾರ್ಥಿನಿಯರು ಕೂಡ ತರಗತಿಗೆ ಬಂದರು. ಅವರಿಗೆ ಪ್ರತ್ಯೇಕ ಕೋಣೆಯಲ್ಲಿ ತರಗತಿಗಳನ್ನು ಆರಂಭಿಸಲಾಯಿತು.

Related