ಪುನರ್ವಸತಿ ಇಲಾಖೆ ಮೇಲೆ ಎಸಿಬಿ ದಾಳಿ

ಪುನರ್ವಸತಿ ಇಲಾಖೆ ಮೇಲೆ ಎಸಿಬಿ ದಾಳಿ

ಆಲಮಟ್ಟಿ: ಹಣ ಪಡೆದು ನಿವೇಶನ ಹಂಚಿಕೆ ಆರೋಪ, ಮಂಗಳವಾರ ಎಸಿಬಿ ಅಧಿಕಾರಿಗಳು ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಇಲಾಖೆಯ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿ, ಕಡತಗಳನ್ನು ವಶಪಡಿಸಿಕೊಂಡಿದ್ದಾರೆ.

ಕೃ಼ಷ್ಣಾ ಮೇಲ್ದಂಡೆ ಯೋಜನೆ ಹಿನ್ನೆಲೆ, ಸ್ಥಳಾಂತರಗೊಂಡು ನಿವೇಶನ ಪಡೆದಿರುವ ಮೂಲ ಸಂತ್ರಸ್ಥರಲ್ಲಿ ಕೆಲವರು ಮನೆಗಳನ್ನು ನಿರ್ಮಿಸಿಕೊಳ್ಳದೇ ಖಾಲಿ ನಿವೇಶನಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಖಾಲಿಯಿರುವ ನಿವೇಶನಗಳನ್ನು ಪತ್ತೆಹಚ್ಚಿ ಸಂತ್ರಸ್ಥರ ಸೋಗಿನಲ್ಲಿರುವ ದಲ್ಲಾಳಿಗಳು ಪುನರ್ವಸತಿ ಇಲಾಖೆಯ ಅಧಿಕಾರಿಗಳಿಗೆ ಸುಮಾರು ೪ಲಕ್ಷ ರೂ. ಆಮಿಷ ಒಡ್ಡಿ, ಮೂಲ ದಾಖಲಾತಿ ತಿದ್ದುಪಡಿ ಮಾಡಿ ಹೊಸ ಹಕ್ಕುಪತ್ರಗಳನ್ನು ಪಡೆಯುತ್ತಿದ್ದಾರೆ. ಈ ಸಂಬಂಧ ಪುನರ್ವಸತಿ ಇಲಾಖೆಯ ಅಧಿಕಾರಿಗಳಿಗೆ ತಮ್ಮ ಹಕ್ಕುಪತ್ರ ತೋರಿಸಿದರೂ ಸ್ಪಂಧಿಸದೇ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಹಕ್ಕುಪತ್ರ ನೀಡಿದ ಹಳೆಯ ದಾಖಲಾತಿಗಳನ್ನು ನಾಶ ಮಾಡಲಾಗಿದೆ. ಕೆಲವು ದಾಖಲೆಗಳನ್ನು ಮಸಿ ಬಳಸಿ ಮೂಲ ಸಂತ್ರಸ್ಥರ ಹೆಸರು ಅಳಿಸಲಾಗಿದೆ ಎಂದು ಸಂತ್ರಸ್ಥರು ದೂರಿದ್ದಾರೆ.

ಈ ಆರೋಪ ಸಂಬಂಧ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಬೆಳಗಾವಿ ಎಸ್ಪಿ ಬಿ.ಎಸ್.ನೇಮಗೌಡ, ಬಾಗಲಕೋಟ ಡಿವೈಎಸ್‌ಪಿ ಮಂಜುನಾಥ ಗಂಗಲ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Related