2303 ಕೋಟಿ ರೂ. ಅನುದಾನ ಬಿಡುಗಡೆ

2303 ಕೋಟಿ ರೂ. ಅನುದಾನ ಬಿಡುಗಡೆ

ಕೆಆರ್ ಪುರ : ಸ್ಮಾರ್ಟಿ ಅಭಿಯಾನದಡಿಯಲ್ಲಿ ಈವರೆಗೆ ಕೇಂದ್ರ ಸರಕಾರ 1325 ಕೋಟಿ ರೂ. ಹಾಗೂ ರಾಜ್ಯ ಸರಕಾರ 978 ಕೋಟಿ ರೂ. ಸೇರಿದಂತೆ ಒಟ್ಟು 2303 ಕೋಟಿ ರೂ. ಬಿಡುಗಡೆಯಾಗಿದೆ. 906 ಕೋಟಿ ರೂ.ಗಳ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ತಿಳಿಸಿದರು.

ಭೈರತಿ ಗ್ರಾಮದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ 7 ಸ್ಮಾರ್ಟ್ ಸಿಟಿಗಳಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ.

ಸ್ಮಾರ್ಟ್ ಸಿಟಿ ಅಭಿಯಾನದಡಿಯಲ್ಲಿ ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ತುಮಕೂರು ಹಾಗೂ ಮಂಗಳೂರು ನಗರಗಳಲ್ಲಿ ಕಮಾಂಡ್ ಕಂಟ್ರೋಲ್ ಸೆಂಟರ್ಗಳನ್ನು ಸ್ಥಾಪಿಸಲಾಗಿದೆ. ಜಿಪಿಎಸ್ ತಂತ್ರಜ್ಞಾನ ಬಳಸಿ ಕೋವಿಡ್-19 ಸೋಂಕಿತ ರೋಗಿಗಳ, ಶಂಕಿತರ ಚಲನವಲನಗಳ ಮೇಲೆ ನಿಗಾವಹಿಸಬೇಕವೆಂದು ಎಂದು ಬಸವರಾಜ ಹೇಳಿದರು.

ಮೈಸೂರು ನಗರದಲ್ಲಿ ಕುಡಿಯುವ ನೀರು ಯೋಜನೆ ಕಲ್ಪಿಸುವ ಹಳೆ ಉಂಡವಾಡಿ ಯೋಜನೆಯನ್ನು ಮುಂದಿನ ಒಂದು ತಿಂಗಳಲ್ಲಿ ಪ್ರಾರಂಭಗೊಳಿಸಲು ಸೂಚಿಸಲಾಗಿದೆ. ಬೆಳಗಾವಿ, ಕಲಬುರಗಿ, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ವಿಜಯಪುರ ಮತ್ತು ತುಮಕೂರುಗಳಿಗೆ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಪ್ರತಿ ಪಾಲಿಕೆಗೆ 125 ಕೋಟಿ ರೂ.ಗಳ ಅನುದಾನದಲ್ಲಿ ಕ್ರಿಯಾಯೋಜನೆ ತಯಾರಿಸಿ, ಅನುಮೋದಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮುಂದಿನ ಒಂದು ವರ್ಷದಲ್ಲಿ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಾಗುವುದು. ಪೌರ ಕಾರ್ಮಿಕರ ಆರೋಗ್ಯ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ವಿಶೇಷ ಗಮನಹರಿಸಿ, ಉತ್ತಮ ಸೌಲಭ್ಯಗಳನ್ನು ಒದಗಿಸಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆ (758 ಮನೆಗಳು) ಸಚಿವ ಸಂಪುಟದ ಅನುಮೋದನೆ ದೊರೆತಿದ್ದು, ನಿಗಧಿತ ಅವಧಿಯಲ್ಲಿ ಮನೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಬಸವರಾಜ ಹೇಳಿದರು.

ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರಕಾರವು ಎರಡನೆ ಅವಧಿಯ ಮೊದಲನೆ ವರ್ಷವನ್ನು ಸಾಕಷ್ಟು ಸವಾಲುಗಳ ನಡುವೆ ಯಶಸ್ವಿಯಾಗಿ ಪೂರೈಸಿದೆ. ಸಂವಿಧಾನದ 370ನೆ ವಿಧಿ ರದ್ದು, ಪೌರತ್ವ ತಿದ್ದುಪಡಿ ವಿಧೇಯಕ-2019, ತ್ರಿವಳಿ ತಲಾಕ್, ಕರ್ತಾರ್ಪುರ್ ಕಾರಿಡಾರ್ ಯೋಜನೆ, ಬ್ರೂ-ರಿಯಾಂಗ್ ಒಪ್ಪಂದ, ಮೂರು ಸೇನಾ ಪಡೆಗಳಿಗೆ ಮುಖ್ಯಸ್ಥರ ನೇಮಕ, ಅಪಾಚೆ ಕೊಂಬ್ಯಾಟ್ ಹೆಲಿಕಾಪ್ಟರ್, ರಾಫೆಲ್ ಏರ್ ಕ್ರಾಫ್ಟ್ ಸೇನೆಗೆ ಸೇರ್ಪಡೆ, ಶ್ರೀರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿ ದೇಶದ ಜನರ ಕನಸನ್ನು ನನಸಾಗಿಸಿದ್ದಾರೆ ಎಂದು ಬಸವರಾಜ ಮೆಚ್ಚುಗೆ ವ್ಯಕ್ತಪಡಿಸಿದರು.

Related