ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಾವು ಬದ್ಧ: ಬೊಮ್ಮಾಯಿ‌

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಾವು ಬದ್ಧ: ಬೊಮ್ಮಾಯಿ‌

ಕಲಬುರಗಿ: ಈ ಭಾಗದಲ್ಲಿ ಕಾಂಗ್ರೆಸ್ ನ ದೊಡ್ಡ ದೊಡ್ಡ ನಾಯಕರಿದ್ದರು, ಈ ಭಾಗಕ್ಕೆ ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ ತೆಗೆದು ಹಾಕಲು ಸಾಧ್ಯವಾಗಿಲ್ಲ. ಬಿ.ಎಸ್ ಯಡಿಯೂರಪ್ಪನವರು ನಾಯಕತ್ವದಲ್ಲಿ 371 ಜೆ ಜಾರಿಗೆ ತರಲಾಗಿದೆ. ಅಪ್ಪುಗೌಡರು ಕಲ್ಬುರ್ಗಿಯ ಸಂಪೂರ್ಣ ಅಭಿವೃದ್ಧಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಕಲಬುರ್ಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದತ್ತಾತ್ರೆಯ ಪಾಟೀಲ್ ರೇವೂರ (ಅಪ್ಪುಗೌಡ ಪಾಟೀಲ್) ಪರ ರೋಡ್ ಶೋ ನಡೆಸಿದ ಬಳಿಕ ಅವರು ಮಾತನಾಡಿದರು.

ಇಂತಹ ಮಳೆಯಲ್ಲಿಯೂ ಇಷ್ಟೊಂದು ಜನರು ಸೇರಿರುವ ನಿಮ್ಮ ಉತ್ಸಾಹ ನೋಡಿದರೆ ಖುಷಿಯಾಗುತ್ತದೆ. ಅಪ್ಪುಗೌಡರು ದಾಖಲೆ ಮತಗಳ ಅಂತರದಿಂದ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಇದೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಅಪ್ಪುಗೌಡರು ಇಡೀ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹತ್ತು ವರ್ಷದಲ್ಲಿ ಅಪ್ಪುಗೌಡರು ಕಲಬುರ್ಗಿ ಸಂಪೂರ್ಣ ಅಭಿವೃದ್ಧಿ ಮಾಡಿದ್ದಾರೆ. ಕಾಂಗ್ರೆಸ್ ನವರು ಅಧಿಕಾರದಲ್ಲಿ ಇದ್ದಾಗ ಒಂದು ಸಾವಿರ ಕೋಟಿ ರೂ. ಮೀಸಲಿಡುತ್ತಿದ್ದರು. ಆದರೆ, ಕೇವಲ 300 ಕೋಟಿ ಮಾತ್ರ ಖರ್ಚಾಗುತ್ತಿತ್ತು. ನಾವು ಬಂದ ಮೇಲೆ ಕಲಬುರ್ಗಿ ಅಭಿವೃದ್ಧಿ ಗೆ ಹೆಚ್ಚಿನ ಅನುದಾನ ನೀಡಿದ್ದೇವೆ ಎಂದರು. ಕಳೆದ ವರ್ಷ 3 ಸಾವಿರ ಕೋಟಿ ಕೊಟ್ಟಿದ್ದೆ. ಈ ವರ್ಷ 5 ಸಾವಿರ ಕೋಟಿ ಕೊಡುತ್ತಿದ್ದೇನೆ ಎಂದರು.

ಕಲಬುರ್ಗಿಯಲ್ಲಿ ಜಯದೇವ ಆಸ್ಪತ್ರೆ, ವಿಮಾನ ನಿಲ್ದಾಣ, ಕ್ಯಾನ್ಸರ್‌ ಆಸ್ಪತ್ರೆ ಆರಂಭ ಮಾಡುತ್ತೇವೆ. ಕಾಂಗ್ರೆಸ್ ನವರು ಗ್ಯಾರೆಂಟಿ ಅಂತ ಹೇಳುತ್ತಿದ್ದಾರೆ. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ. ಕಾಂಗ್ರೆಸ್ ನವರು ಮಂಡಳಿಗೆ ಮೀಸಲಿಟ್ಟ ಹಣವನ್ನೂ ಖರ್ಚು ಮಾಡದೇ ಕಾಲ ಹರಣ ಮಾಡಿದ್ದಾರೆ ಎಂದರು.

ವೈಜನಾಥ ಪಾಟೀಲರ ಹೋರಾಟದ ಫಲವಾಗಿ ನಮ್ಮ ನಾಯಕರಾದ ಯಡಿಯೂರಪ್ಪ ಅವರ ನಾಯಕತ್ವದಲ್ಲಿ 371ಜೆ  ಜಾರಿಗೆ ತರಲಾಗಿದೆ. ಆದರೆ, ಕಾಂಗ್ರೆಸ್ ಅವಧಿಯಲ್ಲಿ 371 ಜೆ ಯಿಂದ ಈ ಭಾಗದ ಯುವಕರಿಗೆ ಯಾವುದೇ ಅನುಕೂಲ ಆಗಲಿಲ್ಲ. ನಾವು ಈ ಭಾಗದಲ್ಲಿ 14,000 ಶಿಕ್ಷಕರ ಹುದ್ದೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದರು.

ಪ್ರಧಾನಿಯವರು ಈ ಭಾಗದಲ್ಲಿ ಟೆಕ್ಸ್ ಟೈಲ್ ಪಾರ್ಕ್ ಮಾಡಲು ಅಡಿಗಲ್ಲು ಹಾಕಿದ್ದಾರೆ. ನಾವು ಬೀದರ್ ನಿಂದ ಬಳ್ಳಾರಿವರೆಗೂ ರಾಷ್ಟ್ರೀಯ ಹೆದ್ದಾರಿ ಮಾಡುತ್ತಿದ್ದೇವೆ. ಇಲ್ಲಿ ಅಭ್ಯರ್ಥಿ ತಮ್ಮ ಕೊನೆಯ ಚುನಾವಣೆ ತಾವು ನಿವೃತ್ತಿ ಆಗುತ್ತೇನೆ ಅಂತ ಹೇಳುತ್ತಿದ್ದಾರೆ. ಅವರನ್ನು ಈಗಲೇ ನಿವೃತ್ತಿ ಮಾಡಿ ಅವರ ಆಸೆ ಈಡೇರಿಸಿ ಕೊಡಿ ಎಂದರು.

ಅಪ್ಪು ಅವರು ಜನ ಉಪಯೋಗಿ ಶಾಸಕ, ಅವರ ತಂದೆ ಮಾಡಿರುವ ಕೆಲಸಗಳು, ಅವರ ಕೆಲಸಗಳನ್ನು ನೋಡಿ ಅವರನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ.

ಬಿಜೆಪಿ ರಾಷ್ಟ್ರದ ಸುರಕ್ಷತೆ ಬಯಸುವ ಪಕ್ಷ. ಅಂತಾರಾಷ್ಟ್ರೀಯ ನಾಯಕ ಮೋದಿ ನಾಯಕತ್ವ ಇರುವ ಪಕ್ಷ ಬಿಜೆಪಿ. ಆಯುಷ್ಮಾನ್ ಭಾರತ್, ವಿದ್ಯಾನಿಧಿ, ಸ್ತ್ರೀ ಸಾಮರ್ಥ್ಯ, ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ಮೂಲಕ 3 ಲಕ್ಷ ಜನರಿಗೆ ಉದ್ಯೋಗ ದೊರೆಯುತ್ತದೆ. ವಿದೇಶಿ ಬಂಡವಾಳ ಸೆಳೆಯುವಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ ಎಂದರು.

ಬೆಂಗಳೂರು ನಂತರ ಕಲಬುರ್ಗಿ ಅಭಿವೃದ್ಧಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿದೆ. ಅಪ್ಪುಗೌಡ ಅವರನ್ನು ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿ ಕಳುಹಿಸಿ ಎಂದು ಸಿಎಂ ಬೊಮ್ಮಾಯಿ‌ ಮತದಾರರಲ್ಲಿ ಮನವಿ ಮಾಡಿದರು.

Related