ನಾಡಿನಾದ್ಯಂತ ಸಂಭ್ರಮದ ʼವರಮಹಾಲಕ್ಷ್ಮಿʼ ಪೂಜೆ

  • In State
  • August 5, 2022
  • 195 Views
ನಾಡಿನಾದ್ಯಂತ ಸಂಭ್ರಮದ ʼವರಮಹಾಲಕ್ಷ್ಮಿʼ ಪೂಜೆ

ಬೆಂಗಳೂರು ಆ5: ಸಂಪತ್ತಿನ ಅಧಿದೇವತೆಯಾದ ವರಮಹಾಲಕ್ಷ್ಮಿ ಪೂಜೆಯನ್ನು ಇಂದು ಸಡಗರ ಸಂಭ್ರಮದಿಂದ ನಾಡಿನಾದ್ಯಂತ ಆಚರಿಸಲಾಯಿತು.

ಹೆಣ್ಣು ಮಕ್ಕಳ ವಿಶೇಷ ಹಬ್ಬವೆಂದೇ ಹೇಳಲಾಗುವ ವರಮಹಾಲಕ್ಷ್ಮಿ ಪೂಜೆಗೆ ನಿನ್ನೆಯಿಂದಲೇ ಪೂಜಾ ಸಾಮಗ್ರಿ ಮತ್ತು ಇತರೆ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು.

ಇಂದು ಬೆಳಗ್ಗೆ ಕೂಡ ಹೂವಿನ ಮಾರುಕಟ್ಟೆ ಸೇರಿದಂತೆ, ತರಕಾರಿ ಮಾರುಕಟ್ಟೆ ಗಳಲ್ಲಿ ಹಬ್ಬಕ್ಕಾಗಿ ಖರೀದಿ ಸಿದ್ಧತೆ ಜೋರಾಗಿತ್ತು.

ಹಬ್ಬದ ಹಿನ್ನಲೆಯಲ್ಲಿ ಹಣ್ಣು, ಹೂವಿನದರ ಹೆಚ್ಚಾಗಿತ್ತು. ಅದರಲ್ಲೂ ಕನಕಾಂಬರ, ಸೇವಂತಿಗೆ, ಮಲ್ಲಿಗೆ ಹೂವು ದರ ದುಪ್ಪಟ್ಟಾಗಿದ್ದು, ಕನಕಾಂಬರ ಮತ್ತು ದುಂಡುಮಲ್ಲಿಗೆ ಮಾರು 300 ರೂ. ರಿಂದ 400 ವರೆಗೆ ದರ ಇತ್ತು. ಸೇವಂತಿಗೆ ಹೂವಿನ ದರ ಕೂಡ ಏರಿಕೆಯಾಗಿತ್ತು.

ಬೆಲೆ ಏರಿಕೆಯ ನಡುವೆಯೂ ಮಹಿಳೆಯರು ಮತ್ತು ಕುಟುಂಬದವರು ಇಂದು ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಅತ್ಯಂತ ಸಂಭ್ರಮದಿಂದ ನೆರವೇರಿಸಿದರು. ಲಕ್ಷ್ಮಿಯನ್ನು ಪೂಜಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.ಅಷ್ಟಲಕ್ಷ್ಮಿ ಪೂಜಿಸುವುದಕ್ಕೆ ವರಮಹಾಲಕ್ಷ್ಮಿ ಪೂಜೆ ಸಮ ಎಂಬ ನಂಬಿಕೆ ಕೂಡ ಇದೆ. ವರಮಹಾಲಕ್ಷ್ಮಿ ವ್ರತ ಆಚರಿಸುವುದರಿಂದ ಕೇವಲ ಸಿರಿ ಮಾತ್ರವಲ್ಲ, ಆರೋಗ್ಯ ಸೌಭಾಗ್ಯವನ್ನು ಪಡೆಯಬಹುದಾಗಿದೆ ಎಂಬ ನಂಬಿಕೆ ಇದೆ.

ಇಂದು ಬೆಳಗ್ಗೆಯೇ ಮನೆಗಳಲ್ಲಿ ಸಂಭ್ರಮದಿಂದ ವರಮಹಾಲಕ್ಷ್ಮಿ ಪೂಜೆ ನೆರವೇರಿಸಲಾಯಿತು. ಮುತ್ತೈದೆಯರನ್ನು ಕರೆದು ದೇವಿಗೆ ಆರತಿ ಬೆಳಗಿ ಅರಿಶಿಣ, ಕುಂಕುಮ ಕಣ ನೀಡಲಾಯಿತು. ನಗರದ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು.

 

 

Related