ಉಮಾಪತಿ ಶಾಸಕರ ವಿರುದ್ದ ಪಿತೂರಿ

ಉಮಾಪತಿ ಶಾಸಕರ ವಿರುದ್ದ ಪಿತೂರಿ

ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಂ. ಸತೀಶ್ ರೆಡ್ಡಿಯವರ ಅಭಿವೃದ್ದಿಯನ್ನು ಸಹಿಸದೇ, ನಿರ್ಮಾಪಕ ಉಮಾಪತಿಗೌಡ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದುದು ಎಂದು ರಾಜ್ಯ ಎಸ್.ಸಿ. ಮೋರ್ಚಾ ಬಿಜೆಪಿ ಕಾರ್ಯದರ್ಶಿ ಬಿ.ಎಂ. ರಮೇಶ್ ಆರೋಪಿಸಿದರು.

ಅವರು, ಬೊಮ್ಮನಹಳ್ಳಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕ್ಷೇತ್ರದಲ್ಲಿ ಅರಕೆರೆ ಕೆರೆ ಅಭಿವೃದ್ದಿ ಬಗ್ಗೆ ಶಾಸಕರ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿರುವುದು ಅಸತ್ಯ. ಉಮಾಪತಿ ಕುಟುಂಬಸ್ಥರು ಹಾಗೂ ಅವರ ಸಹೋದರರು ಮಂಗಮ್ಮನಪಾಳ್ಯ ವಾರ್ಡ್ ನಂ. 190, ಕೆರೆ ಅಂಗಳದ ಸುಮಾರು 12 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡು ಈಗಾಗಲೇ ಅಕ್ರಮ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಈ ಕುರಿತು ಸರ್ಕಾರ ಈಗಾಗಲೇ ಹಲವಾರು ಭಾರಿ ಕಾನೂನು ರೀತಿ ಎಲ್ಲಾ ಕ್ರಮವನ್ನು ಕೈಗೊಂಡಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಸದರಿ ಸ್ವತ್ತು ಸರ್ಕಾರಿ ಸ್ವತ್ತೆಂದು ಗುರುತಿಸಿದ್ದರೂ ಸಹ, ನ್ಯಾಯಾಲಯದ ಮೊರೆ ಹೋಗಿ ಈಗಾಗಲೇ ಸದರಿ ಜಮೀನಿನಲ್ಲಿ ಇಂದಿಗೂ ಸಹ ಅಕ್ರಮವಾಗಿ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿರುತ್ತಾರೆ.

ಬೊಮ್ಮನಹಳ್ಳಿ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಸಾರ್ವಜನಿಕವಾಗಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿ ಎಂದು ಸವಾಲು ಹಾಕಿದ್ದಾರೆ. ಕೇವಲ ರಾಜಕೀಯ ದುರುದ್ದೇಶದಿಂದ ಶಾಸಕರ ವಿರುದ್ದ ಆಧಾರ ರಹಿತ ಆರೋಪ ಮಾಡುವ ಬದಲು ನ್ಯಾಯಯುತವಾಗಿ ಸರ್ಕಾರಿ ಕೆರೆ ಜಾಗವನ್ನು ಸ್ವತಃ ನೀವೇ ತೆರವುಗೊಳಿಸುವ ಮೂಲಕ ತಮ್ಮ ತಪ್ಪನ್ನು ತಿದ್ದಿಕೊಳ್ಳಿ ಎಂದು ಆಗ್ರಹಿಸಿದ್ದಾರೆ.

ಕೇವಲ ಚುನಾವಣೆ ಸಮಯದಲ್ಲಿ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಉಮಾಪತಿಯವರು ಶಾಸಕರ ವಿರುದ್ದ ಪಿತೂರಿ ಮಾಡುವ ಮೂಲಕ ಪುಕ್ಕಟ್ಟೆ ಪ್ರಚಾರ ಪಡೆಯುವ ಪ್ರಯತ್ನ ಮಾಡುತಿದ್ದಾರೆ. ಜೊತೆಗೆ ಈಗಾಗಲೇ ಹತ್ತಾರು ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಹಗಲಿರುಳು ದುಡಿದ ಪ್ರಾಮಾಣಿಕ ಮುಖಂಡರು ಮತ್ತು ಕಾರ್ಯಕರ್ತರನ್ನು  ಮೂಲೆಗುಂಪು ಮಾಡಿ, ತಾನೇ ಸ್ವಯಂಘೋಷಿತ ನಾಯಕನೆಂದು ಬಿಂಬಿಸಿಕೊಳ್ಳುತ್ತಿದ್ದು, ಇದೀಗ  ಕಾಂಗ್ರೆಸ್ ಪಕ್ಷಕ್ಕೆ ಇವರ ಕೊಡುಗೆ ಏನು ಎಂದು ಮೂಲ ಕಾಂಗ್ರೆಸ್ಸಿಗರಿಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಇದೇ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಮೋಹನ್ ರಾಜುರವರು ಮಾತನಾಡಿ, ಉಮಾಪತಿಯವರು ಕೇವಲ ರಾಜಕೀಯ ದುರುದ್ದೇಶದಿಂದ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಆಧಾರ ರಹಿತ ಆರೋಪ ಮಾಡಿ  ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ದ ಹಾಗೂ ಶಾಸಕರ ವಿರುದ್ದ ಭೂ ಕಬಳಿಕೆ ಎಂಬ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ದೇವರಚಿಕ್ಕನಹಳ್ಳಿ ಸರ್ವೆ ನಂ. 33/2ರಲ್ಲಿ 30 ಗುಂಟೆ ಜಮೀನನ್ನು ಬಿಡಿಎ ಪ್ರಾಧಿಕಾರವು ಬಿಟಿಎಂ 4ನೇ ಹಂತ ಬಡಾವಣೆಗಾಗಿ 1988 ರಲ್ಲಿ ಪ್ರಾರಂಭಿಕ ಅಧಿಸೂಚನೆ ಹೊರಡಿಸಿತ್ತು. 1990ರಲ್ಲಿ ಅ೦ತಿಮ ಅಧಿಸೂಚನೆ ಹೊರಡಿಸಿತ್ತು. ಬಿಡಿಎ ಅಧಿಸೂಚನೆಯನ್ನು ಪ್ರಶ್ನಿಸಿ ಸದರಿ ಜಮೀನಿನ ಮಾಲೀಕರು ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. 2017 ರಲ್ಲಿ ಘನ ನ್ಯಾಯಾಲಯದ ರೈತರ ಪರವಾಗಿ ಆದೇಶ ನೀಡಿತ್ತು. ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಿಡಿಎ ಪ್ರಾಧಿಕಾರವು ಅಪೀಲು ಸಲ್ಲಿಸಿದ್ದು, ಅಲ್ಲಿಯೂ ಸಹ ರೈತರ ಪರವಾಗಿ ಆದೇಶ ಬಂದಿರುತ್ತದೆ. ಜೊತೆಗೆ ಸಕ್ಷಮ ಪ್ರಾಧಿಕಾರ ಮೇಲ್ಕಂಡ ಜಮೀನುಗಳನ್ನು ಪರಭಾರೆ ಮಾಡಲು ತಮ್ಮ ಯಾವುದೇ ತಕರಾರು ಇರುವುದಿಲ್ಲವೆಂದು ಹಿಂಬರಹ ಸಹ ನೀಡಿರುತ್ತಾರೆ. ಆದಾದ ಬಳಿಕ ಕಾನೂನು ರೀತಿಯಲ್ಲಿ ಮುನಿರೆಡ್ಡಿ ಹಾಗೂ ಇತರರು ಸದರಿ ಜಮೀನನ್ನು ಕಾನೂನು ರೀತಿಯಲ್ಲಿ ಕ್ರಯಕ್ಕೆ ಪಡೆದಿರುತ್ತಾರೆ.  ಆದರೂ, ಯಾವುದೇ ಕಾನೂನು ತೊಡಕು ಇಲ್ಲದಿದ್ದರೂ, ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸಿ, ರಾಜಕೀಯ ದುರುದ್ದೇಶದಿಂದ ಶಾಸಕ ಸತೀಶ್ ರೆಡ್ಡಿಯವರ ತೇಜೋವಧೆ ಮಾಡಲು ಉಮಾಪತಿ ಶ್ರೀನಿವಾಸ ಗೌಡ ಯತ್ನಿಸುತ್ತಿದ್ದಾರೆ. ಮುಂದಿನ ದಿನದಲ್ಲಿ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಲಿದ್ದಾರೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಮೀನಿನ ಮೂಲ ಮಾಲೀಕರಾದ ಚಂದ್ರು ಶಾಸ್ತಿçಯವರು ಮಾತನಾಡಿ, ಇದು ನಮ್ಮ ಪಿತ್ರಾರ್ಜಿತ ಸ್ವತ್ತಾಗಿದ್ದು, ನಾವು ಬಿಡಿಎ ಭೂ ಸ್ವಾಧೀನ ವೇಳೆ ಹಲವಾರು ವರ್ಷ ಬಿಡಿಎ ವಿರುದ್ದ ಕಾನೂನು ಹೋರಾಟ ನಡೆಸಿ, ನಮ್ಮ ಪರ ಆದೇಶ ಬಂದ ಬಳಿಕ ಕಾನೂನುಬದ್ದವಾಗಿ ಆರ್ಥಿಕ ಸಮಸ್ಯೆಯಿಂದ ಪರಭಾರೆ ಮಾಡಿದ್ದು, ಕೆಲವರು ಅನಗತ್ಯವಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ನಾವು ಸರ್ಕಾರಕ್ಕೆ ಯಾವುದೇ ಮೋಸ ಮಾಡಿರುವುದಿಲ್ಲ ಹಾಗೂ ನಮಗೂ ಯಾವುದೇ ಅನ್ಯಾಯವಾಗಿರುವುದಿಲ್ಲ. ಹಣ ಪಡೆದು ಕ್ರಯಕ್ಕೆ ನೀಡುರುತ್ತೇವೆಂದು ಸ್ಪಷ್ಟಪಡಿಸಿದ್ದಾರೆ.

ಈ ವೇಳೆ ಬೊಮ್ಮನಹಳ್ಳಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಶಿವಾಜಿ, ಬಿಜೆಪಿ ಮುಖಂಡರಾದ ಅನಿಲ್, ಲಕ್ಷö್ಮಣ್ ಇನ್ನಿತರರು ಭಾಗವಹಿಸಿದ್ದರು.

Related